ಉತ್ತರಪ್ರದೇಶದಲ್ಲಿ ಭಾರೀ ಮಳೆ: 47 ಸಾವು

Update: 2019-09-28 17:21 GMT

ಲಕ್ನೋ, ಸೆ. 28: ಉತ್ತರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ 47 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಶುಕ್ರವಾರ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಲಕ್ನೋ, ಅಮೇಥಿ, ಹಾರ್ಡೋಯಿ ಹಾಗೂ ಇತರ ಕೆಲವು ಜಿಲ್ಲೆಗಳ ಆಡಳಿತ ಶನಿವಾರ ಶಾಲೆಗಳಿಗೆ ರಜೆ ಘೋಷಿಸಿದೆ.

 ರಾಜ್ಯದಲ್ಲಿ ಗುರುವಾರದಿಂದ ಮನೆ, ಗೋಡೆ ಕುಸಿತ, ಹಾವು ಕಡಿತ, ಸಿಡಿಲು ಮೊದಲಾದ ಮಳೆ ಸಂಬಂಧಿ ಘಟನೆಗಳಲ್ಲಿ 47 ಮಂದಿ ಮೃತಪಟ್ಟಿದ್ದಾರೆ ಎಂದು ಪರಿಹಾರ ಆಯುಕ್ತರ ಕಚೇರಿಯ ವರದಿ ಹೇಳಿದೆ.

ಪ್ರತಾಪ್‌ಗಢ ಹಾಗೂ ರಾಯ್‌ಬರೇಲಿಯಲ್ಲಿ ತಲಾ 6, ಅಮೇಥಿಯಲ್ಲಿ 5, ಚಂಡೌಲಿ ಹಾಗೂ ವಾರಣಾಸಿಯಲ್ಲಿ ತಲಾ 4, ಪ್ರಯಾಗ್‌ರಾಜ್, ಬಾರಾಬಂಕಿ, ಮಹೋಬಾ, ಮಿರ್ಝಾಪುರದಲ್ಲಿ ತಲಾ 3, ಅಂಬೇಡ್ಕರ್ ನಗರದಲ್ಲಿ 2 ಹಾಗೂ ಕಾನ್ಪುರ, ಗೋರಕ್‌ಪುರ, ಸೋನೆಭದ್ರ, ಅಯೋಧ್ಯಾ, ಶಹಾರಣಪುರ, ಜೌನ್‌ಪುರ, ಕೌಶಂಬಿ, ಅಝಮ್‌ಗಢದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡುವಂತೆ ವಿಭಾಗೀಯ ಆಯುಕ್ತರು ಹಾಗೂ ಜಿಲ್ಲಾ ದಂಡಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News