×
Ad

ಡಾ. ಕಫೀಲ್ ಖಾನ್‍ರಿಂದ ಕ್ಷಮೆ ಯಾಚಿಸಿದ ನಟ, ಮಾಜಿ ಬಿಜೆಪಿ ಸಂಸದ ಪರೇಶ್ ರಾವಲ್

Update: 2019-10-02 14:38 IST

ಹೊಸದಿಲ್ಲಿ, ಅ.2: ಬಾಲಿವುಡ್ ನಟ ಹಾಗೂ ಮಾಜಿ ಬಿಜೆಪಿ ಸಂಸದ ಪರೇಶ್ ರಾವಲ್ ತಾವು ಈ ಹಿಂದೆ ಗೋರಖಪುರದ ಡಾ ಕಫೀಲ್ ಖಾನ್ ವಿರುದ್ಧ ಮಾಡಿದ್ದ ನಿಂದನಾತ್ಮಕ ಟ್ವೀಟ್ ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಕ್ಷಮೆ ಯಾಚಿಸುವುದರಲ್ಲಿ ಯಾವುದೇ ಅವಮಾನವಿಲ್ಲ ಎಂದು ಅವರು ಹೇಳಿದ್ದಾರೆ.

ಗೋರಖಪುರ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಆಗಸ್ಟ್ 2017ರಲ್ಲಿ ಹಲವಾರು ಮಕ್ಕಳು ಸಾವಿಗೀಡಾದ ನಂತರ ಈ ಘಟನೆಗೆ ಕಾರಣರಲ್ಲದೇ ಇದ್ದರೂ  ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಿದ್ದ ಹೊರತಾಗಿಯೂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ ಕಫಿಲ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಹಾಗೂ ಬಳಿಕ ಅವರನ್ನು ಬಂಧಿಸಲಾಗಿತ್ತು. ಆದರೆ ಇಲಾಖಾ ತನಿಖಾ ವರದಿ ಡಾ ಕಫೀಲ್ ಖಾನ್ ಅವರನ್ನು ದೋಷಮುಕ್ತಗೊಳಿಸಿದೆ ಎಂದು ಇತ್ತೀಚೆಗೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪರೇಶ್ ಅವರು ಕ್ಷಮೆ ಯಾಚಿಸಿದ್ದಾರೆ.

‘‘ಒಬ್ಬರು ತಪ್ಪು ಮಾಡದಿರುವಾಗ ಅದರ ಕುರಿತಂತೆ ಕ್ಷಮೆ ಯಾಚಿಸುವುದರಲ್ಲಿ ಯಾವುದೇ ಅವಮಾನವಿಲ್ಲ, ನಾನು ಡಾ ಕಫೀಲ್ ಖಾನ್ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ’’ ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ.

‘‘ರೇಪಿಸ್ಟ್ ??ಐ ಹರ್ಡ್’’ ಎಂದು ಆಗಸ್ಟ್ 2017ರಲ್ಲಿ ಒಬ್ಬರು ಮಾಡಿದ ಟ್ವೀಟ್ ಗೆ ಉತ್ತರಿಸಿದ್ದ ಪರೇಶ್ ರಾವಲ್ ‘‘ಹೌದು, ಆದರೆ ಸದಾ ಸಕ್ರಿಯವಾಗಿರುವ ತಿಗಣೆ ಸಂತಾನದ ಕಣ್ಣಿನಲ್ಲಿ ಹೀರೋ’’ ಎಂದು ಡಾ ಕಫೀಲ್ ಖಾನ್ ಕುರಿತಂತೆ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News