×
Ad

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಅನ್ನು ರಾಣಿಗೆ 8ನೇ ಸ್ಥಾನ

Update: 2019-10-02 23:42 IST

ದೋಹಾ,ಅ.2: ಭಾರತದ ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ದೋಹಾದಲ್ಲಿ ಈಗ ನಡೆಯುತ್ತಿರುವ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಜಾವೆಲಿನ್ ಎಸೆತದ ಫೈನಲ್‌ನಲ್ಲಿ 8ನೇ ಸ್ಥಾನ ಪಡೆದು ನಿರಾಸೆಗೊಳಿಸಿದರು.

ಮಂಗಳವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ 59.25 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ಅನ್ನು ಉತ್ತಮ ಆರಂಭ ಪಡೆದಿದ್ದರು. ತನ್ನ ಮೊದಲ ಪ್ರಯತ್ನದಲ್ಲಿ 12 ಫೈನಲಿಸ್ಟ್‌ಗಳ ಪೈಕಿ ಐದನೇ ಸ್ಥಾನ ಪಡೆದಿದ್ದರು. ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ 27ರ ಹರೆಯದ ರಾಣಿ ಎರಡನೇ ಪ್ರಯತ್ನದಲ್ಲಿ 61.12 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದರು. ಆದರೆ, ಎರಡು ಸ್ಥಾನ ಕೆಳಜಾರಿ 7ನೇ ಸ್ಥಾನಕ್ಕೆ ಕುಸಿದರು. ಮೂರನೇ ಪ್ರಯತ್ನದಲ್ಲಿ 60.20 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ರಾಣಿ ಏಳನೇ ಸ್ಥಾನ ಉಳಿಸಿಕೊಂಡರು.

4ನೇ ಪ್ರಯತ್ನದಲ್ಲಿ 60.40 ಮೀ.ದೂರಕ್ಕೆ ಜಾವೆಲಿನ್ ಎಸೆದ ಅನ್ನು ರಾಣಿ 8ನೇ ಸ್ಥಾನಕ್ಕೆ ಕುಸಿದರು. ಐದನೇ ಪ್ರಯತ್ನದಲ್ಲಿ ಕೇವಲ 58.49 ಮೀ. ದೂರಕ್ಕೆ ಮಾತ್ರ ಜಾವೆಲಿನ್ ಎಸೆದಿದ್ದರು. ರಾಣಿ ಸ್ಪರ್ಧೆಯಲ್ಲಿನ ಶ್ರೇಷ್ಠ ಎಸೆತದ ಸಾಧನೆಯೊಂದಿಗೆ (61.12 ಮೀ.)8ನೇ ಸ್ಥಾನ ಪಡೆದರು.

ಆಸ್ಟ್ರೇಲಿಯದ ಕೆಲಿಸ್-ಲೀ ಬಾರ್ಬರ್ ತನ್ನ ಕೊನೆಯ ಪ್ರಯತ್ನದಲ್ಲಿ 66.56 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದರು. ಚೀನಾದ ಶಿಯಿಂಗ್ ಲಿಯು ಹಾಗೂ ಹ್ಯೂಹು ಲಿಯು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದಾರೆ. ಸೋಮವಾರ ಜಾವೆಲಿನ್ ಎಸೆತ ಸ್ಪರ್ಧೆಯ ಫೈನಲ್‌ಗೆ ತೇರ್ಗಡೆಯಾದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎನಿಸಿಕೊಳ್ಳುವ ಮೂಲಕ ಅನ್ನುರಾಣಿ ಇತಿಹಾಸ ನಿರ್ಮಿಸಿದ್ದರು. 62.43 ಮೀ.ದೂರಕ್ಕೆ ಜಾವೆಲಿನ್ ಎಸೆದು ಮಾರ್ಚ್‌ನಲ್ಲಿ ಪಾಟಿಯಾಲದಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ನಿರ್ಮಿಸಿದ್ದ ತನ್ನದೇ ರಾಷ್ಟ್ರೀಯ ದಾಖಲೆಯನ್ನು(62.34 ಮೀ.)ಉತ್ತಮಪಡಿಸಿಕೊಂಡರು.

►ಅವಿನಾಶ್ ಸಬ್ಲೇ ಫೈನಲ್‌ಗೆ

ಇದೇ ವೇಳೆ, ಭಾರತದ ಅವಿನಾಶ್ ಸಬ್ಲೇ ಪುರುಷರ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಫೈನಲ್ ಸುತ್ತಿಗೆ ತಲುಪಲು ಸಮರ್ಥರಾದರು. ರೇಸ್‌ನ ವೇಳೆ ಭಾರತ ಎರಡು ಘಟನೆಗಳಿಗೆ ಸಂಬಂಧಿಸಿ ಪ್ರತಿಭಟನೆ ಸಲ್ಲಿಸಿತು.

ಮೂರನೇ ಹೀಟ್‌ನಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡ ಸಬ್ಲೇ ಏಳನೇ ಸ್ಥಾನ ಪಡೆದರು. ರೇಸ್‌ನ ವೇಳೆ ಸಬ್ಲೇಗಿಂತ ಮುಂದೆ ಓಡುತ್ತಿದ್ದ ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ಇಥಿಯೋಪಿಯದ ಟಕೆಲೆ ನಿಗಾಟೆ ಮುಗ್ಗರಿಸಿ ಬಿದ್ದರು. ಹೀಗಾಗಿ ಸಬ್ಲೇ ಕೂಡ ಎರಡು ಬಾರಿ ಮುಗ್ಗರಿಸಿ ಬಿದ್ದರು. ಇದರಿಂದಾಗಿ ಸಬ್ಲೇ ಫೈನಲ್ ತಲುಪುವ ವಿಶ್ವಾಸಕ್ಕೆ ಧಕ್ಕೆಯಾಯಿತು.

24ರ ಹರೆಯದ ಸಬ್ಲೇ 8 ನಿಮಿಷ, 25.53 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ರೇಸ್ ಪೂರ್ಣಗೊಳಿಸಿದ್ದ 44 ಅಥ್ಲೀಟ್‌ಗಳ ಪೈಕಿ ಒಟ್ಟಾರೆ 20ನೇ ಸ್ಥಾನ ಪಡೆದರು. ಭಾರತದ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್‌ಐ)ಪ್ರತಿಭಟನೆ ವ್ಯಕ್ತಪಡಿಸಿದ ಬಳಿಕ ಸಬ್ಲೇ 16ನೇ ಸ್ಪರ್ಧಾಳುವಾಗಿ ಶುಕ್ರವಾರ ನಡೆಯುವ ಫೈನಲ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News