ಸ್ವಾಗತ ಬ್ಯಾನರ್ ಅಳವಡಿಕೆಗೆ ಆಕ್ಷೇಪವಿಲ್ಲ: ಹೈಕೋರ್ಟ್

Update: 2019-10-03 17:09 GMT

ಚೆನ್ನೈ, ಆ.3: ಪ್ರಧಾನಿ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಕ್ಟೋಬರ್ 11 ಮತ್ತು 12ರಂದು ಚೆನ್ನೈಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರಿಗೆ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಅಳವಡಿಸಲು ಯಾವುದೇ ಆಕ್ಷೇಪವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಇಂತಹ ಬ್ಯಾನರ್‌ಗಳನ್ನು ಯಾವುದೇ ರಾಜಕೀಯ ಪಕ್ಷದ ಹೆಸರಿನಲ್ಲಿ ಅಳವಡಿಸಬಾರದು ಎಂದು ತಿಳಿಸಿದೆ. ಭಾರತ ಮತ್ತು ಚೀನಾ ನಡುವಿನ ಎರಡನೇ ಅನೌಪಚಾರಿಕ ಶ್ರಂಗಸಭೆ ಅ.11 ಮತ್ತು 12ರಂದು ಮಾಮಲ್ಲಪುರಂನಲ್ಲಿ ನಡೆಯಲಿದೆ.

ಎಐಎಡಿಎಂಕೆಯ ಮಾಜಿ ಕೌನ್ಸಿಲರ್ ಒಬ್ಬರು ಅನುಮತಿ ಪಡೆಯದೆ ಅಳವಡಿಸಿದ ಬ್ಯಾನರ್ ಬಿದ್ದು 23 ವರ್ಷದ ಟೆಕ್ಕಿ ಶುಭಾಶ್ರೀ ಎಂಬವರು ಮೃತಪಟ್ಟ ಹಿನ್ನೆಲೆಯಲ್ಲಿ, ಬ್ಯಾನರ್ ಅಳವಡಿಕೆ ಕುರಿತು ನ್ಯಾಯಾಲಯದ ಅನುಮತಿ ಕೋರಿ ಆಡಳಿತಾರೂಢ ಎಐಎಡಿಎಂಕೆ ಪಕ್ಷ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ವಿಭಾಗೀಯ ಪೀಠ, ಅರ್ಜಿ ಸಲ್ಲಿಸುವ ಅಗತ್ಯವಿತ್ತೇ ಎಂದು ಅಚ್ಚರಿ ವ್ಯಕ್ತಪಡಿಸಿತು. ಈ ಸಂದರ್ಭ ವಾದ ಮಂಡಿಸಿದ ಡಿಎಂಕೆ ಪರ ವಕೀಲರು, ಬ್ಯಾನರ್ ಅಳವಡಿಕೆ ಬಗ್ಗೆ ನಿಯಮ ಇರುವಾಗ ಅದನ್ನು ಪಾಲಿಸುವ ಬದಲು ಹೈಕೋರ್ಟ್ ಮೊರೆ ಹೋಗುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ನ್ಯಾಯಾಲಯದ ಆದೇಶ ಮೀರಿ ಯಾವುದೇ ಕೆಲಸ ಮಾಡಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಸರಕಾರದ ಉದ್ದೇಶವಾಗಿದೆ ಎಂದು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News