ಪ್ರಧಾನಿ ಮೋದಿ, ಶಾ ಫೋಟೊಗಳಿರುವ ಪೋಸ್ಟರ್ ನಲ್ಲಿ ಕಾಂಗ್ರೆಸ್ ನ ಸಿಂಧಿಯಾ !
ಭೋಪಾಲ, ಅ.12: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ, ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆಗಿರುವ ಪೋಸ್ಟರ್‌ಗಳನ್ನು ಮಧ್ಯಪ್ರದೇಶದ ಬಿಂಡ್ ಜಿಲ್ಲೆಯಲ್ಲಿ ಹಾಕಲಾಗಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
“ಈ ಪೋಸ್ಟರ್‌ಗಳನ್ನು ಹಾಕಿರುವುದು ನಾನೇ” ಎಂದು ಹೇಳಿಕೊಂಡಿರುವ ಹೃದೇಶ್ ಶರ್ಮಾ, “ನಾನು ಬಿಜೆಪಿ ಕಾರ್ಯಕರ್ತನಾಗಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೋದಿ ಸರಕಾರದ ನಿರ್ಧಾರವನ್ನು ಸಿಂಧಿಯಾ ಬೆಂಬಲಿಸಿರುವುದಕ್ಕೆ ಧನ್ಯವಾದ ಸೂಚಿಸಿ ಈ ಪೋಸ್ಟರ್‌ಗಳನ್ನು ಹಾಕಿರುವುದಾಗಿ” ತಿಳಿಸಿದ್ದಾರೆ.
ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ಕಮಲ್‌ನಾಥ್ ವಿರುದ್ಧ ಸೋತ ಸಿಂಧಿಯಾ ನಂತರ ಪದೇಪದೆ ಪಕ್ಷದ ವಿರುದ್ಧವೇ ಅಸಮಾಧಾನ ತೋಡಿಕೊಂಡು ಬಂದಿದ್ದಾರೆ. ಅವರು 370ನೇ ವಿಧಿ ರದ್ಧತಿಯನ್ನು ಬೆಂಬಲಿಸಿದ ನಂತರವಂತೂ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಅನುಮಾನ ದಟ್ಟವಾಗಿತ್ತು.
ಗುರುವಾರ ಸಿಂಧಿಯಾ ಬಿಂಡ್‌ಗೆ ಭೇಟಿ ನೀಡುತ್ತಿದ್ದಂತೆ ಶರ್ಮಾ ಹಾಕಿದ್ದ ಪೋಸ್ಟರ್‌ಗಳು ಅವರನ್ನು ಸ್ವಾಗತಿಸಿದ್ದವು. ಈ ಕುರಿತು ಮಾತನಾಡಿದ ಶರ್ಮಾ, ಸಿಂಧಿಯಾ ಅವರು 370ನೇ ವಿಧಿ ರದ್ಧತಿ ಬೆಂಬಲಿಸಿದ ನಂತರ ಜಿಲ್ಲೆಗೆ ಇದೇ ಮೊದಲ ಬಾರಿ ಭೇಟಿ ನೀಡುತ್ತಿರುವುದರಿಂದ ಪೋಸ್ಟರ್‌ಗಳನ್ನು ಹಾಕಿ ಅವರಿಗೆ ಸ್ವಾಗತ ಕೋರಿದ್ದೇನೆ. ರಾಷ್ಟ್ರೀಯ ಹಿತಾಸಕ್ತಿಯ ಪರ ನಿಲ್ಲುವ ಎಲ್ಲರನ್ನೂ ನಾವು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಸಿಂಧಿಯಾ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಪಂಕಜ್ ಚತುರ್ವೇದಿ ತಿಳಿಸಿದ್ದಾರೆ.