ಸೊಸೆಯ ಸ್ವಾಗತಕ್ಕೆ ಪುತ್ರಿ ಜೀವ ಕಳೆದುಕೊಂಡಳು

Update: 2019-10-15 14:45 GMT

ಚೆನ್ನೈ,ಅ.15: ಮಾಜಿ ಎಐಎಡಿಎಂಕೆ ಕೌನ್ಸಿಲರ್ ಪುತ್ರನ ಮದುವೆಗಾಗಿ ಹಾಕಲಾಗಿದ್ದ ಹೋರ್ಡಿಂಗ್ ಮೈಮೇಲೆ ಬಿದ್ದ ಪರಿಣಾಮ ಮಹಿಳಾ ಟೆಕ್ಕಿಯೋರ್ವರು ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಮಂಗಳವಾರ,ಸೊಸೆಯೋರ್ವಳನ್ನು ಸ್ವಾಗತಿಸುವ ಪ್ರಕ್ರಿಯೆಯಲ್ಲಿ ಪುತ್ರಿಯೋರ್ವಳು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಸೆ.12ರಂದು ತನ್ನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಶುಭಶ್ರೀ(23)ಯ ಮೈಮೇಲೆ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಮಾಜಿ ಕೌನ್ಸಿಲರ್ ಸಿ.ಜಯಗೋಪಾಲ ಪುತ್ರನ ವಿವಾಹ ಕಾರ್ಯಕ್ರಮದ ಹೋರ್ಡಿಂಗ್ ಬಿದ್ದಿತ್ತು. ಇದರಿಂದಾಗಿ ನಿಯಂತ್ರಣ ಕಳೆದುಕೊಂಡು ರಸ್ತೆಗೆಸೆಯಲ್ಪಟ್ಟಿದ್ದ ಆಕೆಯ ಮೈಮೇಲೆ ಲಾರಿಯೊಂದು ಹರಿದು ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಜಯಗೋಪಾಲ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಹೋರ್ಡಿಂಗ್ ಅಳವಡಿಕೆಯಲ್ಲಿ ತನ್ನ ಪಾತ್ರವಿಲ್ಲ,ತನ್ನ ಮಗನ ಮೇಲಿನ ಪ್ರೀತಿಯಿಂದ ಪಕ್ಷದ ಕಾರ್ಯಕರ್ತರು ಅದನ್ನು ಹಾಕಿದ್ದರು ಎಂದು ಜಯಗೋಪಾಲ್ ಹೇಳಿದಾಗ,ತಪ್ಪು ಮಾಡಿಲ್ಲವಾದರೆ ಘಟನೆಯ ಬಳಿಕ 12 ದಿನಗಳ ಕಾಲ ತಲೆಮರೆಸಿಕೊಂಡಿದ್ದು ಏಕೆ ಎಂದು ನ್ಯಾಯಾಲಯವು ಪ್ರಶ್ನಿಸಿತು.

ಸೆ.27ರಂದು ಕೃಷ್ಣಗಿರಿ ಜಿಲ್ಲೆಯಲ್ಲಿ ಬಂಧಿಸಲ್ಪಟ್ಟ ಜಯಗೋಪಾಲ್ ಕೊಲೆಯಲ್ಲದ ನರಹತ್ಯೆಯ ಆರೋಪವನ್ನು ಎದುರಿಸುತ್ತಿದ್ದಾರೆ. ಕೆಳ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮುಂದಿನ ವಿಚಾರಣೆ ಅ.17ಕ್ಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News