ಐಎನ್‌ಎಕ್ಸ್ ಮಾಧ್ಯಮ ಪ್ರಕರಣ: ಚಿದಂಬರಂ ಜಾರಿ ನಿರ್ದೇಶನಾಲಯ ವಶಕ್ಕೆ

Update: 2019-10-15 14:49 GMT

ಹೊಸದಿಲ್ಲಿ,ಅ.15: ಐಎನ್‌ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಒಪ್ಪಿಸಲಾಗಿದೆ. ಸೆಪ್ಟಂಬರ್ 5ರಿಂದ ದಿಲ್ಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಚಿದಂಬರಂ ಅವರನ್ನು ಕಸ್ಟಡಿ ವಿಚಾರಣೆಗಾಗಿ ತನ್ನ ವಶಕ್ಕೆ ಒಪ್ಪಿಸಬೇಕು ಎಂಬ ತನಿಖಾ ಸಂಸ್ಥೆಯ ಮನವಿಯನ್ನು ಸ್ವೀಕರಿಸಿದ ದಿಲ್ಲಿಯ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಚಿದಂಬರಂ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಆರೋಪಿಸಿರುವ ತನಿಖಾ ಸಂಸ್ಥೆ, ಮಾಜಿ ವಿತ್ತ ಸಚಿವನನ್ನು ಔಪಚಾರಿಕವಾಗಿ ಬಂಧಿಸುವ ಮತ್ತು ತನ್ನ ಕಸ್ಟಡಿಗೆ ಒಪ್ಪಿಸುವಂತೆ ಕೋರಿ ಸೋಮವಾರ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಿತ್ತು. ಆರಂಭದಲ್ಲಿ ಸಂಸ್ಥೆ ಚಿದಂಬರಂ ಅವರನ್ನು ಆದಷ್ಟು ಶೀಘ್ರವಾಗಿ ಬಂಧಿಸಲು ಬಯಸಿತ್ತು. ಹಾಗಾಗಿ ಅವರನ್ನು ರೌಸ್ ಅವೆನ್ಯೂ ನ್ಯಾಯಾಲಯದ ಆವರಣದಲ್ಲೇ ವಿಚಾರಿಸಿ ನಂತರ ಬಂಧಿಸಲು ನ್ಯಾಯಾಲಯದ ಅನುಮತಿ ಕೇಳಿತ್ತು. ಆದರೆ ಈ ವೇಳೆ ಮಧ್ಯಪ್ರವೇಶಿಸಿದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್, ಈ ವ್ಯಕ್ತಿಯನ್ನು ನೀವು ಸಾರ್ವಜನಿಕವಾಗಿ ವಿಚಾರಣೆ ನಡೆಸುವುದು ಮತ್ತು ಬಂಧಿಸುವುದು ಅವರ ಘನತೆಗೆ ತಕ್ಕುದಲ್ಲ ಎಂದು ಹೇಳಿದ ಕಾರಣ ತನಿಖಾ ಸಂಸ್ಥೆ ತನ್ನ ನಿರ್ಧಾರವನ್ನು ಬದಲಿಸಿತು.

 ನಂತರ ನ್ಯಾಯಾಲಯ, ಚಿದಂಬರಂ ಅವರನ್ನು ಬುಧವಾರ ಬೆಳಗ್ಗೆ ತಿಹಾರ್ ಜೈಲಿನಿಂದ ತನ್ನ ವಶಕ್ಕೆ ಪಡೆದುಕೊಳ್ಳುವಂತೆ ಸಲಹೆ ನೀಡಿತು. ಸಿಬಿಐ ದಾಖಲಿಸಿರುವ ಐಎನ್‌ಎಕ್ಸ್ ಮಾಧ್ಯಮ ಭ್ರಷ್ಟಾಚಾರ ಪ್ರಕರಣದಲ್ಲಿ ಚಿದಂಬರಂ ಅಕ್ಟೋಬರ್ 17ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಚಿದಂಬರಂ ಅವರ ವಿಚಾರಣೆ ಸೆಪ್ಟಂಬರ್ 5ರಂದು ಪೂರ್ಣಗೊಳಿಸಿದ್ದು ಅಂದಿನಿಂದ ಅವರು ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾರೆ.

ಚಿದಂಬರಂ ಬಂಧನ ಕೋರಿದ, ಈಡಿ ಪರ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ, ಚಿದಂಬರಂ ಅವರ ಕಸ್ಟಡಿ ವಿಚಾರಣೆ ಅನಿವಾರ್ಯ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ ಎಂದು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್‌ಗೆ ತಿಳಿಸಿದ್ದರು. ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಚಿದಂಬರಂ ಪರ ವಕೀಲ ಕಪಿಲ್ ಸಿಬಲ್, ಈ ಪ್ರಕರಣದಲ್ಲಿ ಸಿಬಿಐ ಈಗಾಗಲೇ ತನ್ನ ಕಕ್ಷೀದಾರರನ್ನು ಬಂಧನಕ್ಕೆ ಪಡೆದುಕೊಂಡಿರುವ ಕಾರಣ ಅದೇ ಆರೋಪದಲ್ಲಿ ಈಡಿ ಚಿದಂಬರಂ ಕಸ್ಟಡಿ ಕೇಳಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

2007ರಲ್ಲಿ ಐಎನ್‌ಎಕ್ಸ್ ಮಾಧ್ಯಮಕ್ಕೆ ವಿದೇಶಗಳಿಂದ 305 ಕೋಟಿ ರೂ. ಹಣ ಹರಿದುಬಂದಿದ್ದು ಇದನ್ನು ಸಾಧ್ಯವಾಗಿಸಲು ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ (ಎಫ್‌ಐಪಿಬಿ)ಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಸಿಬಿಐ 2017ರಲ್ಲಿ ಎಫ್‌ಐಆರ್ ದಾಖಲಿಸಿತ್ತು. ಪ್ರಕರಣ ನಡೆದ ಅವಧಿಯಲ್ಲಿ ಚಿದಂಬರಂ ವಿತ್ತ ಸಚಿವರಾಗಿದ್ದರು. ನಂತರ ಜಾರಿ ನಿರ್ದೇಶನಾಲಯ ಚಿದಂಬರಂ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News