ಭಾರತದ ಆರ್ಥಿಕ ಬೆಳವಣಿಗೆಯನ್ನು 7.3ರಿಂದ 6.1 ಶೇ.ಕ್ಕಿಳಿಸಿದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ

Update: 2019-10-15 16:09 GMT

 ಹೊಸದಿಲ್ಲಿ,ಅ.15: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಭಾರತದ ಜಿಡಿಪಿ ಬೆಳವಣಿಗೆ ದರದ 2019ನೇ ಸಾಲಿನ ಮುನ್ನಂದಾಜನ್ನು ಮಂಗಳವಾರ ಶೇ.6.1ಕ್ಕೆ ತಗ್ಗಿಸಿದೆ. ಇದು ಎಪ್ರಿಲ್‌ನಲ್ಲಿ ಅದು ಮುನ್ನಂದಾಜಿಸಿದ್ದ ಜಿಡಿಪಿ ಬೆಳವಣಿಗೆ ದರಕ್ಕಿಂತ ಶೇ.1.2ರಷ್ಟು ಕಡಿಮೆಯಾಗಿದೆ. ರವಿವಾರವಷ್ಟೇ ವಿಶ್ವಬ್ಯಾಂಕ್ ತನ್ನ ಸೌಥ್ ಏಷ್ಯಾ ಇಕನಾಮಿಕ್ ಫೋಕಸ್‌ನ ಇತ್ತೀಚಿನ ಆವೃತ್ತಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು 2018ನೇ ಸಾಲಿನ ಶೇ.6.9ರಿಂದ 2019ನೇ ಸಾಲಿಗೆ ಶೇ.6ಕ್ಕೆ ಕುಸಿಯಲಿದೆ ಎಂದು ಹೇಳಿತ್ತು.

ಐಎಂಎಫ್ ಎಪ್ರಿಲ್‌ನಲ್ಲಿ 2019ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ.7.3ರಷ್ಟಾಗಲಿದೆ ಎಂದು ಹೇಳಿತ್ತು.

 2018ರಲ್ಲಿಯ ಭಾರತದ ನೈಜ ಜಿಡಿಪಿ ಬೆಳವಣಿಗೆ ದರ ಶೇ.6.8ಕ್ಕೆ ಹೋಲಿಸಿದರೆ 2019ರಲ್ಲಿ ಅದು ಶೇ.6.1ರಷ್ಟು ಮತ್ತು 2020ರಲ್ಲಿ ಚೇತರಿಸಿಕೊಂಡು ಶೇ.7ರಷ್ಟಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ತನ್ನ ಇತ್ತೀಚಿನ ವರ್ಲ್ಡ್ ಇಕನಾಮಿಕ್ ಔಟ್‌ಲುಕ್(ಡಬ್ಲುಇಒ)ನ ಇತ್ತೀಚಿನ ಆವೃತ್ತಿಯಲ್ಲಿ ಮುನ್ನಂದಾಜಿಸಿದೆ.

ಹಣಕಾಸು ನೀತಿಯ ಸಡಿಲಿಕೆಯ ವಿಳಂಬಿತ ಪರಿಣಾಮಗಳು,ಕಾರ್ಪೊರೇಟ್ ಆದಾಯ ತೆರಿಗೆ ದರಗಳಲ್ಲಿ ಕಡಿತ, ಕಾರ್ಪೊರೇಟ್ ಮತ್ತು ಪರಿಸರ ನಿಯಂತ್ರಕ ಅನಿಶ್ಚಿತತೆಯನ್ನು ಬಗೆಹರಿಸಲು ಇತ್ತೀಚಿನ ಕ್ರಮಗಳು ಮತ್ತು ಗ್ರಾಮೀಣ ಬಳಕೆಯನ್ನು ಹೆಚ್ಚಿಸಲು ಸರಕಾರದ ಕಾರ್ಯಕ್ರಮಗಳು ಜಿಡಿಪಿ ಬೆಳವಣಿಗೆಯನ್ನು ಬೆಂಬಲಿಸಲಿವೆ ಎಂದು ಐಎಂಎಫ್ ಹೇಳಿದೆ.

2018ನೇ ಸಾಲಿಗೆ ಶೇ.6.6 ಜಿಡಿಪಿ ಬೆಳವಣಿಗೆ ದರವನ್ನು ದಾಖಲಿಸಿದ್ದ ಚೀನಾದ ಜಿಡಿಪಿ 2019ನೇ ಸಾಲಿಗೆ ಶೇ.6.1 ಮತ್ತು 2020ನೇ ಸಾಲಿಗೆ ಶೇ.5.8ರಷ್ಟಾಗಲಿದೆ ಎಂದೂ ಐಎಂಎಫ್ ಅಂದಾಜಿಸಿದೆ.

ಆಟೊಮೊಬೈಲ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿಯ ಹಿನ್ನಡೆ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆರೋಗ್ಯದ ಕುರಿತ ಅನಿಶ್ಚಿತತೆ ಇವುಗಳಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಇನ್ನಷ್ಟು ಕುಸಿದಿದೆ ಎಂದು ಐಎಂಎಫ್ ಮತ್ತು ವಿಶ್ವ ಬ್ಯಾಂಕ್‌ಗಳ ವಾರ್ಷಿಕ ಸಭೆಯ ಮುನ್ನ ಬಿಡುಗಡೆಗೊಂಡ ಡಬ್ಲುಇಒ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News