ವಿಜಯ ಹಝಾರೆ ಟ್ರೋಫಿ: ಕರ್ನಾಟಕ ಸೆಮಿ ಫೈನಲ್‌ಗೆ

Update: 2019-10-20 17:54 GMT

ಬೆಂಗಳೂರು, ಅ.20: ಶ್ರೇಷ್ಠ ಫಾರ್ಮ್ ಮುಂದುವರಿಸಿದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಸಾಹಸದ ನೆರವಿನಿಂದ ಕರ್ನಾಟಕ ತಂಡ ವಿಜಯ ಹಝಾರೆ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಪಾಂಡಿಚೇರಿ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿ ಸೆಮಿ ಫೈನಲ್ ತಲುಪಿದೆ.

ಇಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಂಡಿಚೇರಿ ತಂಡ 9 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಲಷ್ಟೇ ಶಕ್ತವಾಯಿತು. ವ್ನಿೇಶ್ವರನ್ ಮಾರಿಮುತ್ತು ಔಟಾಗದೆ 58 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

ಅನುಭವಿ ಬೌಲರ್ ಅಭಿಮನ್ಯು ಮಿಥುನ್(2-35)ನೇತೃತ್ವದ ಕರ್ನಾಟಕದ ಬೌಲರ್‌ಗಳು ಪಾಂಡಿಚೇರಿಯ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗರನ್ನು ಕಾಡಿದರು. ಮಾರಿಮುತ್ತು ಹಾಗೂ ಸಾಗರ್ ತ್ರಿವೇದಿ(54) ಇನಿಂಗ್ಸ್‌ನ್ನು ಆಧರಿಸಿದರು.

ಪಾಂಡಿಚೇರಿ ಒಂದು ಹಂತದಲ್ಲಿ 41 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು. ಆಗ ಮಾರಿಮುತ್ತು ಹಾಗೂ ಸಾಗರ್ ತ್ರಿವೇದಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.

ವಿಕೆಟ್ ಉರುಳಿಸುವ ಕಾಯಕ ಮುಂದುವರಿಸಿದ ಕರ್ನಾಟಕ ಬೌಲರ್‌ಗಳು ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಲೆಗ್-ಸ್ಪಿನ್ನರ್ ಪ್ರವೀಣ್ ದುಬೆ(3-44) ಹಾಗೂ ವಾಸುಕಿ ಕೌಶಿಕ್(2-33)ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಮೊದಲ ವಿಕೆಟ್ ಜೊತೆಯಾಟದಲ್ಲಿ 98 ರನ್ ಸೇರಿಸಿದ ರಾಹುಲ್ ಹಾಗೂ ಇನ್ನೋರ್ವ ಆರಂಭಿಕ ದೇವದತ್ತ ಪಡಿಕ್ಕಲ್(50)ಕರ್ನಾಟಕದ ರನ್ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. 112 ಎಸೆತಗಳನ್ನು ಎದುರಿಸಿದ ರಾಹುಲ್ ಇನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಇತ್ತು. ಪಡಿಕ್ಕಲ್ ಔಟಾದ ಬಳಿಕ ರೋಹನ್ ಕದಮ್, ರಾಹುಲ್‌ಗೆ ಸೂಕ್ತ ಜೊತೆ ನೀಡಿದರು. ಈ ಇಬ್ಬರು 2ನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿ ಪಂದ್ಯವನ್ನು ಪಾಂಡಿಚೇರಿ ಕೈಯಿಂದ ಕಸಿದರು.

ರಾಹುಲ್ ಔಟಾದ ಬಳಿಕ ನಾಯಕ ಮನೀಷ್ ಪಾಂಡೆ(ಔಟಾಗದೆ 20)ಜೊತೆ ಕೈಜೋಡಿಸಿದ ಕದಮ್ ಗೆಲುವಿನ ವಿಧಿವಿಧಾನ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News