×
Ad

ಟಿ-20 ವಿಶ್ವಕಪ್ ಅರ್ಹತಾ ಟೂರ್ನಿ: ನೆದರ್‌ಲ್ಯಾಂಡ್‌ಗೆ ಪ್ರಶಸ್ತಿ

Update: 2019-11-03 23:47 IST

ದುಬೈ, ನ.3: ನೆದರ್‌ಲ್ಯಾಂಡ್ ತಂಡ ಇಲ್ಲಿನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟ್ವೆಂಟಿ-20 ವಿಶ್ವಕಪ್‌ನ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ(ಪಿಎನ್‌ಜಿ) ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಸುಲಭ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಬ್ರೆಂಡನ್ ಗ್ಲೋವರ್ಸ್(3-23)ಬೌಲಿಂಗ್‌ನಲ್ಲಿ ಮಿಂಚಿದರೆ, ಬ್ಯಾಟಿಂಗ್‌ನಲ್ಲಿ ಬೆನ್ ಕೂಪರ್(41) ಹಾಗೂ ರಿಯಾನ್ ಟೆನ್ ಡೊಶ್ಚೆಟ್ (ಔಟಾಗದೆ 34) ಡಚ್ ಗೆಲುವಿಗೆ ನೆರವಾದರು.

ನೆದರ್‌ಲ್ಯಾಂಡ್ ಹಾಗೂ ಪಪುವಾ ನ್ಯೂ ಗಿನಿ ತಂಡಗಳು ಓಮಾನ್, ಸ್ಕಾಟ್ಲೆಂಡ್, ನಮೀಬಿಯಾ ಹಾಗೂ ಐರ್ಲೆಂಡ್ ಜೊತೆಗೂಡಿ ಆಸ್ಟ್ರೇಲಿಯದಲ್ಲಿ ಮುಂದಿನ ವರ್ಷ ನಡೆಯುವ ಟಿ-20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಅರ್ಹತೆ ಪಡೆದಿವೆ. ವಗೀರ್ ಕರಣ ಉದ್ದೇಶಕ್ಕಾಗಿ ಶನಿವಾರ ಫೈನಲ್ ಪಂದ್ಯ ನಡೆಸಲಾಗಿತ್ತು.

ಟಾಸ್ ಜಯಿಸಿದ ನ್ಯೂಗಿನಿ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 128 ರನ್ ಗಳಿಸಿತು.

ಡಚ್ಚರ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ನ್ಯೂಗಿನಿ ತಂಡ ಪವರ್‌ಪ್ಲೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಲೆಗಾ ಸಿಯಕಾ(39 ರನ್, 41 ಎಸೆತ)ಗರಿಷ್ಠ ಸ್ಕೋರ್ ಗಳಿಸಿದರೆ, ಜೇಸನ್ ಕಿಲಾ 29 ರನ್(11ಎಸೆತ)ಗಳಿಸಿದರು. ನೆದರ್‌ಲ್ಯಾಂಡ್ ಪರ ಗ್ಲೋವರ್(3-24) ಯಶಸ್ವಿ ಬೌಲರ್ ಎನಿಸಿಕೊಂಡರು. ವಾನ್‌ಡರ್ ಮೆರ್ವ್(2-15)ಹಾಗೂ ವಾನ್‌ಡರ್ ಗುಗ್ಟೆನ್(2-18)ತಲಾ ಎರಡು ವಿಕೆಟ್ ಪಡೆದರು.

129 ರನ್ ಗುರಿ ಬೆನ್ನಟ್ಟಿದ ಡಚ್ ತಂಡ ಬೆನ್ ಕೂಪರ್(41 ರನ್, 33 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ರಿಯಾನ್ ಟೆನ್ ಡೊಶ್ಚೆಟ್(ಔಟಾಗದೆ 34, 23 ಎಸೆತ, 2 ಬೌಂಡರಿ, 3 ಸಿಕ್ಸರ್)ಸಾಹಸದಿಂದ ಆರು ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್‌ಗಳ ನಷ್ಟಕ್ಕೆ 134 ರನ್ ಗಳಿಸಿತು.

24 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದ ಬ್ರೆಂಡನ್ ಗ್ಲೋವರ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಯುಎಇ ವಿರುದ್ಧ ಎರಡೂ ಪಂದ್ಯಗಳಲ್ಲಿ ಡಚ್‌ಗೆ ಗೆಲುವು ತಂದುಕೊಟ್ಟಿದ್ದ ಬ್ರೆಂಡನ್ ಗ್ಲೋವೆರ್ಸ್ ಟೂರ್ನಿಯಲ್ಲಿ ಒಟ್ಟು 16 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.

ಟೂರ್ನಮೆಂಟ್‌ನಲ್ಲಿ ಒಟ್ಟು 268 ರನ್ ಗಳಿಸಿದ ನಮೀಬಿಯಾದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಾಸ್ಮಸ್ ಮುಂದಿನ ವರ್ಷ ನಡೆಯುವ ವಿಶ್ವಕಪ್‌ಗೆ ನಮೀಬಿಯಾ ಅರ್ಹತೆ ಪಡೆಯಲು ಪ್ರಮುಖ ಪಾತ್ರವಹಿಸಿದ್ದರು.

ಇದಕ್ಕೂ ಮೊದಲು ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಐರ್ಲೆಂಡ್ ತಂಡ ನಮೀಬಿಯಾವನ್ನು 27 ರನ್‌ಗಳಿಂದ ರೋಚಕವಾಗಿ ಮಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News