ಸಾಜನ್ ಕೈ ತಪ್ಪಿದ ಕಂಚು
ಬುಡಾಪೆಸ್ಟ್, ನ.3: ಮೂರು ಬಾರಿ ಪದಕ ವಿಜೇತ ಸಾಜನ್ ಭನ್ವಾಲ್(77ಕೆಜಿ)23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೊ-ರೋಮನ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವುದರಿಂದ ವಂಚಿತರಾದರು. 97 ಕೆಜಿ ವಿಭಾಗದಲ್ಲಿ ರವಿ ರಿಪಿಚೇಜ್ ಸುತ್ತಿಗೆ ತಲುಪಿದರು.
ಇಲ್ಲಿ ರವಿವಾರ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಟರ್ಕಿಯ ಸೆರ್ಕಾನ್ ಅಕ್ಕೊಯುನ್ ವಿರುದ್ಧ ಭನ್ವಾಲ್ 1-10 ಅಂತರದಿಂದ ಸೋತಿದ್ದಾರೆ.
ರವಿ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಜಿಯದ ಕುಸ್ತಿಪಟು ಗಿಯೊರ್ಗಿ ಮಿಲಿಯಾ ವಿರುದ್ಧ 0-8 ಅಂತರದಿಂದ ಸೋತಿದ್ದಾರೆ. ಮಿಲಿಯಾ ಫೈನಲ್‌ಗೆ ತಲುಪಿದ ಕಾರಣ ರವಿಗೆ ಪದಕ ಗೆಲ್ಲಲು ಮತ್ತೊಂದು ಅವಕಾಶ ಲಭಿಸಿದೆ.
ಅರ್ಜುನ್ ಹಲಾಕುರ್ಕಿ 55ಕೆಜಿ ರಿಪಿಚೇಜ್ ಸುತ್ತಿನಲ್ಲಿ ಅರ್ಮೆನಿಯದ ನೊರಾ ಹಖೊಯನ್‌ಗೆ 2-10 ಅಂತರದಿಂದ ಶರಣಾದರು. 87 ಕೆಜಿ ವಿಭಾಗದ ಮೊದಲ ರಿಪಿಚೇಜ್ ಪಂದ್ಯದಲ್ಲಿ ಸ್ವೀಡನ್‌ನ ಅಲೆಕ್ಸಾಂಡರ್ ಜಾರ್ಜಿ ವಿರುದ್ಧ 5-3 ಅಂತರದಿಂದ ಗೆಲುವು ಸಾಧಿಸಿದ ಸುನೀಲ್ ಕುಮಾರ್ ಕಂಚಿನ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದರು. ಆದರೆ, ಮತ್ತೊಂದು ರಿಪಿಚೇಜ್ ಪಂದ್ಯದಲ್ಲಿ ಕ್ರೊಯೇಶಿಯದ ಇವಾನ್ ಹುಕ್ಲೇಕ್ ವಿರುದ್ಧ 3-6 ಅಂತರದಿಂದ ಸೋತಿದ್ದಾರೆ.