ಆಸ್ಟ್ರೇಲಿಯದ ಗೆಲುವಿಗೆ ಅಡ್ಡಿಯಾದ ಮಳೆರಾಯ
ಸಿಡ್ನಿ, ನ.3: ಪಾಕಿಸ್ತಾನ ವಿರುದ್ಧ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿದ್ದ ಆಸ್ಟ್ರೇಲಿಯಕ್ಕೆ ಮಳೆರಾಯ ಅಡ್ಡಿಪಡಿಸಿದೆ. ಪಾಕಿಸ್ತಾನ ಸಂಭಾವ್ಯ ಸೋಲಿನ ಭೀತಿಯಿಂದ ಪಾರಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನ(ಎಸ್‌ಸಿಜಿ)ದಲ್ಲಿ ರವಿವಾರ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ 15 ಓವರ್‌ಗಳಿಗೆ ಕಡಿತವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪ್ರವಾಸಿ ಪಾಕ್ ತಂಡ 5 ವಿಕೆಟ್‌ಗಳ ನಷ್ಟಕ್ಕೆ 107 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಗೆಲ್ಲಲು 119 ರನ್ ಪರಿಷ್ಕೃತ ಗುರಿ ಪಡೆಯಿತು.
ದಟ್ಟ ಮೋಡ ಕವಿದ ವಾತಾವರಣದಲ್ಲಿ ಫಿಂಚ್ 37 ರನ್ (16 ಎಸೆತ, 5 ಬೌಂಡರಿ,2 ಸಿಕ್ಸರ್)ಗಳಿಸಿ ಗುಡುಗಿದರು. ಕಳೆದ ಮೂರು ಇನಿಂಗ್ಸ್ ಗಳಲ್ಲಿ ಔಟಾಗದೆ ಉಳಿದಿದ್ದ ಡೇವಿಡ್ ವಾರ್ನರ್(ಔಟಾಗದೆ 2)ಮತ್ತೊಂದು ತುದಿಯಲ್ಲಿ ಫಿಂಚ್ ಅಬ್ಬರದ ಬ್ಯಾಟಿಂಗ್‌ಗೆ ಸಾಕ್ಷಿಯಾದರು.
ಮತ್ತೊಮ್ಮೆ ಭಾರೀ ಮಳೆ ಸುರಿದಾಗ ಆಸ್ಟ್ರೇಲಿಯ 3.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿತ್ತು. ಮಳೆ ಮುಂದುವರಿದ ಕಾರಣ ಪಂದ್ಯವನ್ನು ರದ್ದುಪಡಿಸಲಾಗಿದ್ದು, ಮೊದಲ ಪಂದ್ಯ ಫಲಿತಾಂಶರಹಿತವಾಗಿ ಅಂತ್ಯವಾಯಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕ್ ಪರ ವಿಶ್ವ ಅಗ್ರ ರ್ಯಾಂಕಿನ ಆಟಗಾರ ಬಾಬರ್ ಔಟಾಗದೆ 59 ರನ್ ಗಳಿಸಿದರು. 11ನೇ ಅರ್ಧಶತಕ ಸಿಡಿಸಿದ 25ರ ಹರೆಯದ ಬಾಬರ್ 38 ಎಸೆತಗಳ ಇನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆರಂಭಿಕ ಆಟಗಾರ ಫಕಾರ್ ಝಮಾನ್(0) ತಾನೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು.
ಹಾರಿಸ್ ಸೊಹೈಲ್ ಅಂಪೈರ್ ಕಳಪೆ ತೀರ್ಪಿಗೆ ಔಟಾದಾಗ ಪಾಕ್ 10 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ ಬಾಬರ್ ಆಝಂ ಹಾಗೂ ಮುಹಮ್ಮದ್ ರಿಝ್ವನ್ ಮೂರನೇ ವಿಕೆಟ್‌ಗೆ 60 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಲು ಯತ್ನಿಸಿದರು. ಈ ಜೋಡಿಯನ್ನು ಸ್ಪಿನ್ನರ್ ಆಸ್ಟ್ಟೊನ್ ಅಗರ್ ಬೇರ್ಪಡಿಸಿದರು.
ಸರಣಿಯ ಎರಡನೇ ಪಂದ್ಯ ಕ್ಯಾನ್‌ಬೆರ್ರಾದಲ್ಲಿ ಮಂಗಳವಾರ ನಡೆಯಲಿದೆ.