ತಿರುವಳ್ಳುವರ್ ಗೆ ಕೇಸರಿ ವಸ್ತ್ರ: ವಿವಾದ ಸೃಷ್ಟಿಸಿದ ಬಿಜೆಪಿಯ ಟ್ವೀಟ್

Update: 2019-11-04 08:16 GMT

ಚೆನ್ನೈ, ನ.4: ಖ್ಯಾತ ತಮಿಳು ಕವಿ ಹಾಗೂ ತತ್ವಜ್ಞಾನಿ ತಿರುವಳ್ಳುವರ್ ಬಿಳಿ ಶಾಲಿನ  ಬದಲು ಕೇಸರಿ ಶಾಲು ಧರಿಸಿದ ಚಿತ್ರವನ್ನು ತಮಿಳುನಾಡು ಬಿಜೆಪಿ ಘಟಕ ಟ್ವೀಟ್ ಮಾಡಿ ವಿವಾದಕ್ಕೀಡಾಗಿದೆ. ದ್ರಾವಿಡ ಸಂಘಟನೆಗಳ ಆಕ್ರೋಶಕ್ಕೆ ಟ್ವೀಟ್ ಗುರಿಯಾಗಿದ್ದು, ಬಿಜೆಪಿ ತಿರುವಳ್ಳುವರ್ ಅವರನ್ನೂ ಕೇಸರೀಕರಣಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.

ತಿರುವಳ್ಳುವರ್ ಅವರ ದ್ವಿಪದಿಗಳಲ್ಲೊಂದನ್ನೂ ಈ ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ. 'ದೇವರನ್ನು ವ್ಯಂಗ್ಯವಾಡುವವರಿಗೆ ತಿರುವಳ್ಳುವರ್ ಅವರ ಅಗತ್ಯವೇನಿದೆ?' ಎಂದು ಪ್ರಶ್ನಿಸಿದ ಟ್ವೀಟ್ ತಿರುವಳ್ಳುವರ್ ತಮ್ಮ ಕೃತಿಗಳಲ್ಲಿ ಏನು ಹೇಳಿದ್ದರೆಂಬುದನ್ನು ದ್ರಾವಿಡ ಕಳಗಂ, ಡಿಎಂಕೆ ಮತ್ತು ಕಮ್ಯುನಿಸ್ಟರು ಅರಿಯಬೇಕು ಎಂದಿದೆ.

"ಬಿಜೆಪಿಯು ತಮಿಳಿನ ಸಂತರನ್ನು ತನ್ನ ಕೇಸರೀಕರಣ ಅಜೆಂಡಾಗೆ ಬಳಸಿಕೊಳ್ಳುತ್ತಿದೆ, ಇದರ ಬದಲು ಅವರ ಕೃತಿಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ'' ಎಂದು ಡಿಎಂಕೆ ಅಧ್ಯಕ್ಷ  ಎಂ ಕೆ ಸ್ಟಾಲಿನ್ ಬಿಜೆಪಿಗೆ ಕರೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ,  "ತಪ್ಪು ಮಾಡದೆಯೇ ಸ್ಟಾಲಿನ್ ಅವರು ತಿರುವಳ್ಳುವರ್ ಅವರ ದ್ವಿಪದಿಯೊಂದನ್ನು ಪಠಿಸಬೇಕು ಇಲ್ಲವೇ ರಾಜಕೀಯದಿಂದ ನಿವೃತ್ತರಾಗಬೇಕು'' ಎಂದು ಸವಾಲೆಸೆದಿದೆ.

"ಮೂಲತಃ ತಿರುವಳ್ಳುವರ್ ಅವರು ಹಣೆಗೆ ವಿಭೂತಿ ಹಚ್ಚುತ್ತಿದ್ದರು. ಆದರೆ ದ್ರಾವಿಡ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಅವರು ಕಾಣುತ್ತಿದ್ದ ರೀತಿಯನ್ನು ಬದಲಾಯಿಸಿದ್ದವು'' ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News