×
Ad

ಆರ್ ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕುವುದಿಲ್ಲ: ಪ್ರಧಾನಿ ಮೋದಿ

Update: 2019-11-04 19:34 IST

 ಹೊಸದಿಲ್ಲಿ,ನ.4: ಚೀನಾ ಬೆಂಬಲಿತ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ವ್ಯಾಪಾರ ಒಪ್ಪಂದದಲ್ಲಿ ಭಾಗಿಯಾಗದಿರಲು ಭಾರತವು ಸೋಮವಾರ ನಿರ್ಧರಿಸಿದ್ದು,ಒಪ್ಪಂದದ ಕುರಿತು ತನ್ನ ಪ್ರಮುಖ ಕಳವಳಗಳನ್ನು ಬಗೆಹರಿಸಲಾಗಿಲ್ಲ ಎಂದು ಹೇಳಿದೆ.

ಇದೇ ವೇಳೆ ಭಾರತವನ್ನು ಹೊರಗಿಟ್ಟು ಒಪ್ಪಂದವನ್ನು ಅಂತಿಮಗೊಳಿಸಲು ‘ಆಸಿಯಾನ್‌’ನ 10 ಸದಸ್ಯ ರಾಷ್ಟ್ರಗಳು ಮತ್ತು ಈ ಗುಂಪಿನೊಂದಿಗೆ ಗುರುತಿಸಿಕೊಂಡಿರುವ ಇತರ ಐದು ರಾಷ್ಟ್ರಗಳು ನಿರ್ಧರಿಸಿವೆ ಮತ್ತು ಭಾರತವು ಯಾವಾಗ ಬೇಕಾದರೂ ಒಪ್ಪಂದದಲ್ಲಿ ಭಾಗಿಯಾಗಬಹುದು ಎಂದು ಚೀನಾ ಹೇಳಿದೆ.

ಮುಖ್ಯ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಆರ್‌ಸಿಇಪಿ ತನ್ನ ಮೂಲ ಉದ್ದೇಶವನ್ನು ಪ್ರತಿಫಲಿಸುತ್ತಿಲ್ಲ ಎಂದು ಹಿರಿಯ ಸರಕಾರಿ ಮೂಲಗಳು ಇಲ್ಲಿ ತಿಳಿಸಿದವು.

ಭಾರತದ ನಿಲುವು ವಾಸ್ತವ ವ್ಯವಹಾರಿಕತೆ,ಬಡವರ ಹಿತಾಸಕ್ತಿಗಳನ್ನು ರಕ್ಷಿಸುವ ಒತ್ತಾಸೆ ಮತ್ತು ದೇಶದ ಸೇವಾ ಕ್ಷೇತ್ರಕ್ಕೆ ಲಾಭವನ್ನೊದಗಿಸುವ ಪ್ರಯತ್ನದ ಸಮ್ಮಿಶ್ರಣವಾಗಿದೆ ಎಂದೂ ಅವು ಹೇಳಿದವು.

“ಇಂತಹ ನಿರ್ಧಾರಗಳಲ್ಲಿ ನಮ್ಮ ರೈತರು,ವ್ಯಾಪಾರಿಗಳು,ವೃತ್ತಿಪರರು ಮತ್ತು ಕೈಗಾರಿಕೆಗಳ ಹಿತಾಸಕ್ತಿಗಳು ಅಡಗಿವೆ. ಭಾರತವನ್ನು ಬೃಹತ್ ಮಾರುಕಟ್ಟೆಯನ್ನಾಗಿ ಮತ್ತು ಖರೀದಿ ಸಾಮರ್ಥ್ಯದಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡಿರುವ ಕಾರ್ಮಿಕರು ಮತ್ತು ಬಳಕೆದಾರರೂ ಅಷ್ಟೇ ಮುಖ್ಯವಾಗಿದ್ದಾರೆ. ಎಲ್ಲ ಭಾರತೀಯರ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಆರ್‌ಸಿಇಪಿಯನ್ನು ತೂಗಿ ನೋಡಿದಾಗ ಯಾವುದೇ ಧನಾತ್ಮಕ ಉತ್ತರ ನನಗೆ ದೊರಕಿಲ್ಲ. ಹೀಗಾಗಿ ಆರ್‌ಸಿಇಪಿಗೆ ಸೇರ್ಪಡೆಗೊಳ್ಳಲು ನನ್ನ ಮನಃಸ್ಸಾಕ್ಷಿ ಅನುಮತಿಯನ್ನು ನೀಡುತ್ತಿಲ್ಲ” ಎಂದು ಬ್ಯಾಂಕಾಕ್‌ನಲ್ಲಿ ಆರ್‌ಸಿಇಪಿ ಶೃಂಗದಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಚೀನಿ ಆಮದುಗಳ ವಿರುದ್ಧ ರಕ್ಷಣೆಗಾಗಿ ಸುಂಕ ಇಳಿಕೆಗೆ 2014ನ್ನು ಮೂಲ ವರ್ಷವಾಗಿ ಪರಿಗಣಿಸುವಿಕೆ ಮತ್ತು 15 ರಾಷ್ಟ್ರಗಳಿಂದ ಸೇವೆಗಳ ಕ್ಷೇತ್ರವನ್ನು ಮುಕ್ತಗೊಳಿಸುವಿಕೆ ಸೇರಿದಂತೆ ಹಲವಾರು ಕಳವಳಗಳನ್ನು ಬೆಟ್ಟು ಮಾಡುವ ಮೂಲಕ ಮೋದಿ ಸರಕಾರವು ಆರ್‌ಸಿಇಪಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಠಿಣ ನಿಲುವು ತಳೆದಿತ್ತು.

ಯಾವುದೇ ಗಡುವನ್ನು ಸ್ವೀಕರಿಸಲು ಮೋದಿ ಸರಕಾರವು ಸಿದ್ಧವಿಲ್ಲ ಮತ್ತು ದೇಶದ ಹಿತಾಸಕ್ತಿಗಳ ಸಂಪೂರ್ಣ ರಕ್ಷಣೆಯಾಗಬೇಕು ಎಂದು ಬಯಸಿದೆ ಎಂದು ಭಾರತೀಯ ಅಧಿಕಾರಿಗಳು ಒಪ್ಪಂದದ ಕುರಿತು ಇತರ ರಾಷ್ಟ್ರಗಳೊಂದಿಗಿನ ಚರ್ಚೆಯಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ಭಾರತವು ಜಾಗತಿಕ ಶಕ್ತಿಗಳ ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಅದು ಈ ಬಾರಿ ರಕ್ಷಣಾತ್ಮಕ ನಿಲುವನ್ನು ತಳೆದಿದೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News