ಪಾಲಕ್ಕಾಡ್ ಎನ್‌ಕೌಂಟರ್: ಹತ ನಕ್ಸಲರ ಅಂತ್ಯಸಂಸ್ಕಾರ ನಡೆಸದಂತೆ ಕೇರಳ ಸರಕಾರಕ್ಕೆ ಹೈಕೋರ್ಟ್ ನಿರ್ದೇಶ

Update: 2019-11-05 16:21 GMT

 ಕೊಚ್ಚಿ,ನ.5: ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಮಾವೋವಾದಿಗಳಾದ ಕಾರ್ತಿ ಮತ್ತು ಮಣಿವಸಾಕಂ ಅವರ ಶವಗಳ ಅಂತ್ಯಸಂಸ್ಕಾರವನ್ನು ನಡೆಸದಂತೆ ಕೇರಳ ಉಚ್ಚ ನ್ಯಾಯಾಲಯವು ಮಂಗಳವಾರ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ. ಘಟನೆಯ ಕುರಿತು ವ್ಯಕ್ತವಾಗಿರುವ ಶಂಕೆಗಳನ್ನು ಸರಕಾರವು ನಿವಾರಿಸಬೇಕಿದೆ ಎಂದು ಅದು ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮುಂದಿನ ಆದೇಶದವರೆಗೆ ಶವಗಳನ್ನು ಕೊಳೆಯದಂತೆ ಸಂರಕ್ಷಿಸಿಡುವಂತೆ ಆದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಮೃತ ಮಾವೋವಾದಿಗಳ ಶವಗಳ ಅಂತ್ಯಸಂಸ್ಕಾರ ನಡೆಸಲು ಪೊಲೀಸರಿಗೆ ಅನುಮತಿ ನೀಡಿರುವ ಪಾಲಕ್ಕಾಡ್ ಸೆಷನ್ಸ್ ನ್ಯಾಯಾಧೀಶರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕಾರ್ತಿ ಮತ್ತು ಮಣಿವಸಾಕಂ ಅವರ ಬಂಧುಗಳಾದ ಎಂ.ಮುರುಗೇಶನ್ ಮತ್ತು ಲಕ್ಷ್ಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ನಡೆಸುತ್ತಿದೆ.

ಸೆಷನ್ಸ್ ನ್ಯಾಯಾಲಯವು ಮರಣೋತ್ತರ ಪರೀಕ್ಷಾ ವರದಿಯನ್ನು ಪರಿಶೀಲಿಸದೆ ತನ್ನ ಆದೇಶವನ್ನು ಹೊರಡಿಸಿದೆ. ಇದು ಕಸ್ಟಡಿಯಲ್ಲಿ ನಡೆದ ಕೊಲೆಯಾಗಿದೆ,ಎನ್‌ಕೌಂಟರ್ ಸಾವಲ್ಲ. ಹೀಗಾಗಿ ನ್ಯಾಯಯುತ ತನಿಖೆಯ ಅಗತ್ಯವಿದೆ. ಎನ್‌ ಕೌಂಟರ್ ಹತ್ಯೆಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಮತ್ತು ಮರಣೋತ್ತರ ಪರೀಕ್ಷಾ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ.

ಮಾವೋವಾದಿಗಳ ಹತ್ಯೆಗಳಿಗೆ ಹೊಣೆಗಾರರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶ ನೀಡುವಂತೆಯೂ ಕೋರಿರುವ ಅರ್ಜಿದಾರರು,ಶವಗಳ ಅಂತ್ಯಸಂಸ್ಕಾರ ನಡೆಸಿದರೆ ಮರು ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News