ವಾಸ್ತವಾಂಶಗಳ ವಿರುದ್ಧ ನಂಬಿಕೆಯ ವಿಜಯ: ಉವೈಸಿ

Update: 2019-11-09 16:46 GMT

ಹೈದರಾಬಾದ್, ನ. 9: ಅಯೋಧ್ಯೆಯ ಜಮೀನು ವಿವಾದ ಪ್ರಕರಣದಲ್ಲಿ ಶನಿವಾರ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪು ‘‘ವಾಸ್ತವಾಂಶಗಳ ವಿರುದ್ಧ ನಂಬಿಕೆಯ ವಿಜಯವಾಗಿದೆ’’ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ಶನಿವಾರ ಹೇಳಿದ್ದಾರೆ ಹಾಗೂ ಮಸೀದಿ ನಿರ್ಮಾಣಕ್ಕಾಗಿ ನೀಡಲಾಗಿರುವ 5 ಎಕರೆ ಜಮೀನನ್ನು ತಿರಸ್ಕರಿಸುವಂತೆ ಸಲಹೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸಿದ ಅವರು, ‘‘ಸುಪ್ರೀಂ ಕೋರ್ಟ್ ಶ್ರೇಷ್ಠ ಹಾಗೂ ಅಂತಿಮ... ಆದರೆ ತಪ್ಪು ಮಾಡದಿರುವಂಥದ್ದಲ್ಲ’’ ಎಂಬ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ಜೆ.ಎಸ್. ವರ್ಮರ ಹೇಳಿಕೆಯನ್ನು ಉಲ್ಲೇಖಿಸಿದರು.

‘‘ಇದು ‘ವಾಸ್ತವಾಂಶಗಳ ವಿರುದ್ಧ ನಂಬಿಕೆಯ ವಿಜಯ’ದ ತೀರ್ಪಾಗಿದೆ’’ ಎಂದರು.

 ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಹೊರಗಡೆ 5 ಎಕರೆ ಜಮೀನು ನೀಡುವ ತೀರ್ಪಿಗೆ ಪ್ರತಿಕ್ರಿಯಿಸಿದ ಅವರು, ಮುಸ್ಲಿಮರು ಜಮೀನಿನ ಕಾನೂನು ಹಕ್ಕಿಗಾಗಿ ಹೋರಾಡುತ್ತಿದ್ದರು ಹಾಗೂ ಅವರಿಗೆ ಯಾರಿಂದಲೂ ಯಾವುದೇ ದೇಣಿಗೆಯ ಅಗತ್ಯವಿಲ್ಲ ಎಂದರು.

 ‘‘ನಮಗೆ ಯಾರದೇ ದೇಣಿಗೆಯ ಅಗತ್ಯವಿಲ್ಲ. ನಮಗೆ ಪೋಷಕರು ಬೇಕಾಗಿಲ್ಲ. ಇಂದಿಗೂ ನಾನು ಹೈದರಾಬಾದ್‌ನ ರಸ್ತೆಗಳಲ್ಲಿ ಬೇಡಿದರೆ, ಉತ್ತರ ಪ್ರದೇಶದಲ್ಲಿ 5 ಎಕರೆ ಜಮೀನನ್ನು ಖರೀದಿಸಲು ಸಾಧ್ಯವಾಗುವಷ್ಟು ಹಣವನ್ನು ಜನರು ಖಂಡಿತವಾಗಿಯೂ ನಮಗೆ ನೀಡುತ್ತಾರೆ’’ ಎಂದು ಉವೈಸಿ ಹೇಳಿದರು.

ಮಸೀದಿಯ ವಿಷಯದಲ್ಲಿ ಯಾವುದೇ ರಾಜಿ ಇರಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಈ ವಿಷಯದಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ನಿರ್ಧಾರಕ್ಕೆ ಬದ್ಧ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News