ಹಿಂದು ಯುವತಿಯ ವಿವಾಹ ನಿಮಿತ್ತ ಮೀಲಾದುನ್ನಬಿ ಆಚರಣೆ ಮುಂದೂಡಿದ ಮಸೀದಿ

Update: 2019-11-12 09:27 GMT
ಫೋಟೊ ಕೃಪೆ: deccanherald

ತಿರುವನಂತಪುರಂ, ನ.12: ಕೇರಳದ ಕೊಝಿಕ್ಕೋಡ್ ಜಿಲ್ಲೆಯ ಪೆರಂಬರ ಸಮೀಪದ ಪಲೇರಿ ಎಂಬಲ್ಲಿನ ಇಡಿವೆಟ್ಟಿ ಜುಮಾ ಮಸೀದಿ ರವಿವಾರ (ನ.10) ಮೀಲಾದುನ್ನಬಿ ದಿನಾಚರಣೆಯಂದು  ಕೈಗೊಂಡ ಒಂದು ನಿರ್ಧಾರದ ಮೂಲಕ ಜಗತ್ತಿಗೆ ಮತೀಯ ಸೌಹಾರ್ದದ ಸಂದೇಶ ಸಾರಿದೆ.

ಮೀಲಾದುನ್ನಬಿ ದಿನದಂದೇ ಮಸೀದಿಯ ಪಕ್ಕದಲ್ಲಿಯೇ ವಾಸಿಸುವ ಹಿಂದು ಯುವತಿಯೊಬ್ಬಳ ವಿವಾಹ ನಿಗದಿಯಾಗಿತ್ತು. ಇದನ್ನು ಅರಿತ ಮಸೀದಿ ಸಮಿತಿ ಆ ದಿನ ಮಿಲಾದುನ್ನಬಿ ಆಚರಿಸಿದರೆ ಇಡೀ ದಿನ ಧ್ವನಿವರ್ಧಕದ ಬಳಕೆ ಮಾಡಬೇಕಾಗುತ್ತದೆ ಅಲ್ಲದೆ, ಮಸೀದಿಯಲ್ಲಿ ಊಟದ ವ್ಯವಸ್ಥೆ ಇರುವುದರಿಂದ ಹಲವಾರು ಮಂದಿ ಆಗಮಿಸುತ್ತಾರೆ. ಇದರಿಂದ ವಿವಾಹ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಅನಾನುಕೂಲವಾಗಬಹುದು ಎಂಬುದನ್ನು ಮನಗಂಡ ಮಸೀದಿ ಆಡಳಿತ ಸಮಿತಿ ನವೆಂಬರ್ 10ರ ಬದಲು ನವೆಂಬರ್ 17ರಂದು ಮಿಲಾದುನ್ನಬಿ ಆಚರಣೆ ನಡೆಸಲು ತೀರ್ಮಾನಿಸಿದೆ.

ದಿವಂಗತ ನಾರಾಯಣನ್ ನಂಬಿಯಾರ್ ಹಾಗೂ ಇಂದಿರಾ ದಂಪತಿಯ ಪುತ್ರಿ ಪ್ರತ್ಯೂಷಾಳ ವಿವಾಹ ಆ ದಿನ ನಡೆದಿತ್ತು. ಮಸೀದಿ ಆಡಳಿತ ತನಗೋಸ್ಕರ ಔದಾರ್ಯ ಮೆರೆದಿದೆ ಎಂದು ಅರಿತ ಪ್ರತ್ಯೂಷಾ ವಿವಾಹದ ನಂತರ ತನ್ನ ಪತಿ ವಿನು ಪ್ರಸಾದ್ ಜತೆಗೆ ಮಸೀದಿಗೆ ತೆರಳಿ ಅಲ್ಲಿನ ಆಡಳಿತ ಸಮಿತಿಗೆ ಧನ್ಯವಾದ ತಿಳಿಸಿದ್ದಾಳೆ.

ಮೀಲಾದುನ್ನಬಿ ಆಚರಣೆ ಮುಂದೂಡುವಿಕೆ ನಿರ್ಧಾರ ಸರ್ವಾನುಮತದ್ದಾಗಿತ್ತು ಎಂದು ಮಸೀದಿಯ ಮಹಲ್ ಸಮಿತಿ ಕಾರ್ಯದರ್ಶಿ ಎನ್.ಸಿ.ಅಬ್ದುರ್ರಹ್ಮಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News