ಭಾರತ-ಬಾಂಗ್ಲಾ ನಡುವಿನ ದ್ವಿತೀಯ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಪಿಚ್ ಸಿದ್ಧ: ಕ್ಯುರೇಟರ್

Update: 2019-11-17 18:24 GMT

ಕೋಲ್ಕತಾ, ನ.17: ಕೋಲ್ಕತಾದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಈಡನ್‌ಗಾರ್ಡನ್ಸ್ ನ ಕ್ರಿಕೆಟ್ ಪಿಚ್‌ಗೂ ತುಸು ಹಾನಿ ಸಂಭವಿಸಿದ್ದರೂ ಅಂಗಣದ ಸಿಬ್ಬಂದಿಯ ಅವಿರತ ಪ್ರಯತ್ನದಿಂದ ಈಗ ಭಾರತ-ಬಾಂಗ್ಲಾ ನಡುವಿನ ಚೊಚ್ಚಲ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಪಿಚ್ ಅನ್ನು ಸಿದ್ಧಗೊಳಿಸಲಾಗಿದೆ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನ ಕ್ಯುರೇಟರ್ ಸುಜನ್ ಮುಖರ್ಜಿ ಹೇಳಿದ್ದಾರೆ.

 ಭಾರತ- ಬಾಂಗ್ಲಾ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯ ಈಡನ್ ಗಾರ್ಡನ್ಸ್‌ನಲ್ಲಿ ನವೆಂಬರ್ 22ರಿಂದ ಆರಂಭವಾಗಲಿದೆ. ಭಾರತದಲ್ಲಿ ನಡೆಯುವ ಚೊಚ್ಚಲ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಸ್ಪರ್ಧಾತ್ಮಕ ಪಿಚ್ ಸಿದ್ಧಗೊಳಿಸಲಾಗಿದೆ ಎಂದು ಮುಖರ್ಜಿ ಹೇಳಿದ್ದಾರೆ. ಪಿಚ್ ಸಿದ್ಧಗೊಳಿಸಿದ ಬಳಿಕ ಇದರಲ್ಲಿ ಒಂದು ಅಭ್ಯಾಸ ಪಂದ್ಯವಾಡಬೇಕೆಂದು ಬಯಸಿದ್ದೆವು. ಆದರೆ ಪ್ರತಿಕೂಲ ಹವಾಮಾನ ಇದಕ್ಕೆ ಆಸ್ಪದ ನೀಡಲಿಲ್ಲ. ಸ್ಥಳೀಯ ತಂಡಗಳ ಮಧ್ಯೆ ಪಂದ್ಯ ಆಡಲು ನಿರ್ಧರಿಸಿದ್ದರೂ ಬಳಿಕ ಕೈಬಿಡಲಾಗಿದೆ. ಆದರೆ ಪಿಚ್‌ಗೆ ಹೆಚ್ಚಿನ ಹಾನಿಯಾಗಿಲ್ಲ. ಪಿಚ್‌ನ ಹಸಿರು ಚೆಂಡಿಗೆ ಹೆಚ್ಚಿನ ಬೌನ್ಸ್ ನೀಡಲಿದೆ. ಇಲ್ಲಿ ಅತ್ಯುತ್ತಮ ಟೆಸ್ಟ್ ಪಂದ್ಯ ನಡೆಯುವುದರಲ್ಲಿ ಸಂಶಯವಿಲ್ಲ ಎಂದು ಮುಖರ್ಜಿ ಹೇಳಿದ್ದಾರೆ. ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಬಳಕೆಯಾಗುವ ಪಿಂಕ್ ಬಾಲ್ ಎರಡು ದಿನಗಳ ಹಿಂದೆ ಈಡನ್ ಗಾರ್ಡನ್ಸ್‌ಗೆ ರವಾನೆಯಾಗಿದ್ದು ಒಂದೆರಡು ದಿನದಲ್ಲಿ ಈ ಚೆಂಡುಗಳನ್ನು ಪಿಚ್‌ನ ಮೇಲೆ ಬಳಸಿ ಪರೀಕ್ಷಿಸಲಾಗುತ್ತದೆ. ಆದರೆ ಇದರಿಂದ ಹೆಚ್ಚಿನ ವ್ಯತ್ಯಾಸವೇನೂ ಅಗುವುದಿಲ್ಲ. ಕೆಂಪು ಚೆಂಡಾಗಲೀ, ಪಿಂಕ್ ಚೆಂಡಾಗಲೀ ಪಿಚ್ ಈ ಹಿಂದಿನ ಟೆಸ್ಟ್ ಪಂದ್ಯದ ಸಂದರ್ಭದಂತೆಯೇ ವರ್ತಿಸುತ್ತದೆ. ಇದು ಸ್ಪರ್ಧಾತ್ಮಕ ಪಿಚ್ ಎಂದು ಮುಖರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News