ಮೊದಲ ಟೆಸ್ಟ್‌: ಲ್ಯಾಬುಸ್ಚಾಗ್ನೆ, ವಾರ್ನರ್ ಭರ್ಜರಿ ಶತಕ

Update: 2019-11-23 18:00 GMT

ಬ್ರಿಸ್ಬೇನ್, ನ.23: ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಆಲ್‌ರೌಂಡ್ ಪ್ರದರ್ಶನ ನೀಡಿದ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧ ಪಾರಮ್ಯ ಮೆರೆದಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಮಾರ್ನಸ್ ಲ್ಯಾಬುಸ್ಚಾಗ್ನೆ(185) ಹಾಗೂ ಡೇವಿಡ್ ವಾರ್ನರ್(154)ಭರ್ಜರಿ ಶತಕದ ಸಹಾಯದಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನದ ಮೊದಲ ಇನಿಂಗ್ಸ್ ಮೊತ್ತ 240ಕ್ಕೆ ಉತ್ತರವಾಗಿ ಒಟ್ಟು 580 ರನ್ ಗಳಿಸಿ ಆಲೌಟ್ ಆಗಿದೆ.

ದಿನದಾಟದಂತ್ಯಕ್ಕೆ ಪಾಕಿಸ್ತಾನ 64 ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆಸ್ಟ್ರೇಲಿಯವನ್ನು ಮತ್ತೊಮ್ಮೆ ಬ್ಯಾಟಿಂಗ್‌ಗೆ ಇಳಿಸಲು ಇನ್ನೂ 276 ರನ್ ಗಳಿಸುವ ಅಗತ್ಯವಿದೆ. ಮೂರನೇ ದಿನದಾಟ ಕೊನೆಗೊಂಡಾಗ ಶಾನ್ ಮಸೂದ್(ಔಟಾಗದೆ 27)ಹಾಗೂ ಬಾಬರ್ ಆಝಂ(20)ಕ್ರೀಸ್ ಕಾಯ್ದುಕೊಂಡಿದ್ದಾರೆ. ದಿನದ ಕೊನೆಯ ಅವಧಿಯಲ್ಲಿ ನಾಯಕ ಅಝರ್ ಅಲಿ ಅವರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದ ಮಿಚೆಲ್ ಸ್ಟಾರ್ಕ್ ಪಾಕ್‌ಗೆ 2ನೇ ಇನಿಂಗ್ಸ್‌ನ ಆರಂಭದಲ್ಲೇ ಶಾಕ್ ನೀಡಿದರು. ಸ್ಟಾರ್ಕ್ ಅವರು ಹ್ಯಾರಿಸ್ ಸೊಹೈಲ್ ವಿಕೆಟ್‌ನ್ನ್ನು ಪಡೆದು ತಂಡದ ಸಂಕಷ್ಟ ಹೆಚ್ಚಿಸಿದರು.

ಇದಕ್ಕೂ ಮೊದಲು ಲ್ಯಾಬುಸ್ಚಾಗ್ನೆ ತನ್ನ ತವರು ಮೈದಾನದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಮಿಂಚಿದರು. ಈ ವರ್ಷಾರಂಭದಲ್ಲಿ ಆ್ಯಶಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಬದಲಿಗೆ ತಂಡವನ್ನು ಸೇರಿಕೊಂಡು ಇತಿಹಾಸ ನಿರ್ಮಿಸಿದ್ದ ಲ್ಯಾಬುಸ್ಚಾಗ್ನೆ ಅವರು ಜೋಫ್ರಾ ಅರ್ಚರ್ ಬೌನ್ಸರ್‌ನಲ್ಲಿ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದರು. ವಾರ್ನರ್(154) ವಿಕೆಟ್‌ನ್ನು ಕಬಳಿಸಿದ ಪಾಕಿಸ್ತಾನದ 16ರ ಹರೆಯದ ಬೌಲರ್ ನಸೀಂ ಶಾ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಕೆಟ್ ಪಡೆದರು. ವಾರ್ನರ್ ನಿನ್ನೆಯ ಮೊತ್ತಕ್ಕೆ ಕೇವಲ ಮೂರು ರನ್ ಗಳಿಸಿ ನಸೀಂಗೆ ಮೊದಲ ಬಲಿಯಾದರು.

ವಾರ್ನರ್ ಬೇಗನೆ ಔಟಾದ ಬಳಿಕ ಲ್ಯಾಬುಸ್ಚಾಗ್ನೆ ಹಾಗೂ ಮ್ಯಾಥ್ಯೂ ವೇಡ್ 110 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ವೇಡ್ 60 ರನ್ ಗಳಿಸಿ ರಿಝ್ವಾನ್‌ಗೆ ವಿಕೆಟ್ ಒಪ್ಪಿಸಿದರು. ಪಂದ್ಯದುದ್ದಕ್ಕೂ ಆಸ್ಟ್ರೇಲಿಯ ದಾಂಡಿಗರಿಂದ ಚೆನ್ನಾಗಿ ದಂಡಿಸಲ್ಪಟ್ಟಿರುವ ಪಾಕಿಸ್ತಾನ, ಆಸೀಸ್‌ನ ಕೊನೆಯ 5 ವಿಕೆಟ್‌ಗಳನ್ನು 35 ರನ್ ಅಂತರದಲ್ಲಿ ಉರುಳಿಸಿತು. ಯಾಸಿರ್ ಶಾ(4-205) ಹಾಗೂ ಶಾಹೀನ್ ಅಫ್ರಿದಿ(2-96)ಆರು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News