ವಿಶ್ವಾಸಮತದಲ್ಲಿ ಬಿಜೆಪಿಗೆ ಸೋಲು ಖಚಿತ: ಕಾಂಗ್ರೆಸ್

Update: 2019-11-23 18:03 GMT
PTI

ಮುಂಬೈ, ನ.23: ವಿವಾದಾಸ್ಪದ ರೀತಿಯಲ್ಲಿ , ಕೇವಲ ಮೂರು ನಾಲ್ಕು ಮಂದಿ ಮಾಧ್ಯಮದವರನ್ನು ಆಹ್ವಾನಿಸಿ ತರಾತುರಿಯಲ್ಲಿ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರಕಾರ ವಿಶ್ವಾಸಮತ ಯಾಚನೆಯಲ್ಲಿ ವಿಫಲವಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

 ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಪಕ್ಷಗಳು ವಿಶ್ವಾಸಮತದ ವಿರುದ್ಧ ಮತ ಚಲಾಯಿಸಲಿವೆ ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ. ಶನಿವಾರ ಬೆಳಿಗ್ಗಿನಿಂದ ನಡೆದ ವಿದ್ಯಮಾನವನ್ನು ಗಮನಿಸಿದರೆ ಬಿಜೆಪಿ ಅಧಿಕಾರ ವಶಮಾಡಿಕೊಳ್ಳಲು ಅನೈತಿಕ ಮಾರ್ಗ ಹಿಡಿದಿರುವುದು ಸ್ಪಷ್ಟವಾಗಿದೆ. ಬೆಳಿಗ್ಗೆ ರಾಷ್ಟ್ರಪತಿ ಆಡಳಿತ ಹಿಂಪಡೆದ ಕೆಲ ಘಂಟೆಗಳಲ್ಲೇ ಪ್ರಮಾಣವಚನ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ. ಈ ಎಲ್ಲಾ ವಿದ್ಯಮಾನಗಳಲ್ಲಿ ರಾಜ್ಯಪಾಲರ ಪಾತ್ರದ ಬಗ್ಗೆಯೂ ಪ್ರಶ್ನೆ ಮೂಡುತ್ತಿದೆ ಎಂದು ಪಟೇಲ್ ಹೇಳಿದ್ದಾರೆ.

 ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರಕಾರ ರಚನೆ ವಿಳಂಬವಾಗಲು ಕಾಂಗ್ರೆಸ್ ಕಾರಣ ಎಂಬ ವರದಿಯನ್ನು ನಿರಾಕರಿಸಿದ ಅವರು, ನಮ್ಮ ಕಡೆಯಿಂದ ವಿಳಂಬವಾಗಿಲ್ಲ. ನಿಗದಿತ ವೇಳೆಯಲ್ಲೇ ಚರ್ಚೆ, ಸಭೆ ನಡೆದಿದೆ. ವಿಳಂಬಕ್ಕೆ ಕಾಂಗ್ರೆಸ್ ಪಕ್ಷವನ್ನು ದೂಷಿಸುವುದು ವೈಯಕ್ತಿಕ ಅಭಿಪ್ರಾಯವಷ್ಟೇ. ರಾಜ್ಯದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿರುವ ಈ ಬಿಕ್ಕಟ್ಟಿಗೆ ರಾಜಕೀಯ, ನ್ಯಾಯಾಂಗ ಕ್ರಮದ ಮೂಲಕ ಪರಿಹಾರ ಹುಡುಕಲು ಮೂರೂ ಪಕ್ಷಗಳು ಜತೆಯಾಗಿ ಕಾರ್ಯನಿರ್ವಹಿಸಲಿವೆ ಎಂದು ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News