ಬಿಜೆಪಿ ನಾಯಕನಿಗೆ ಥಳಿಸಿ, ಗುಂಡಿಗೆ ಎಸೆದ ಟಿಎಂಸಿ ಕಾರ್ಯಕರ್ತರು

Update: 2019-11-25 13:16 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಹಾಗೂ ಕರೀಂಪುರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿನ ಬಿಜೆಪಿ ಅಭ್ಯರ್ಥಿ ಜಯ್ ಪ್ರಕಾಶ್ ಮಜೂಂದಾರ್ ಅವರನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೆಂದು ಹೇಳಲಾದ ಕೆಲವರ ಗುಂಪು ಥಳಿಸಿ, ತುಳಿದು ಕೊನೆಗೆ ಗುಂಡಿಯೊಂದಕ್ಕೆ ಎಸೆದ ಘಟನೆ ಸೋಮವಾರ ಚುನಾವಣೆ ನಡೆಯುತ್ತಿರುವಾಗಲೇ ವರದಿಯಾಗಿದೆ.

ಸುದ್ದಿ ಸಂಸ್ಥೆ ಎಎನ್‍ಐ ಶೇರ್ ಮಾಡಿದ ವೀಡಿಯೊದಲ್ಲಿ ಹಲ್ಲೆಕೋರರು ಜಯ್ ಪ್ರಕಾಶ್ ಅವರು ಕಾರಿನಿಂದ ಹೊರ ಬರುತ್ತಿರುವಂತೆಯೇ ಅವರನ್ನು ಎಳೆದಾಡಿ ತುಳಿಯತ್ತಿರುವುದು ಕಾಣಿಸುತ್ತದೆ. ಅವರು ಮತದಾನ ಕೇಂದ್ರವೊಂದಕ್ಕೆ ಆಗಮಿಸು ತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ.

''ದಾಳಿಕೋರರು ನನ್ನನ್ನು ತುಳಿದು, ಹಲ್ಲೆಗೈದು ಘೋಷಣೆಗಳನ್ನು ಕೂಗಿದ್ದಾರೆ. ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ'' ಎಂದು ಜಯ್ ಪ್ರಕಾಶ್ ಆರೋಪಿಸಿದ್ದಾರೆ.

''ನಾನು ಬೂತ್ ಸಂಖ್ಯೆ 49 ತಲುಪಿ ನನ್ನ ಇಬ್ಬರು ಏಜಂಟರನ್ನು ಅಲ್ಲಿ ಬಿಟ್ಟ ಕೆಲವೇ ನಿಮಿಷಗಳಲ್ಲಿ ಅವರನ್ನು ಕೆಲ ಟಿಎಂಸಿ ಕಾರ್ಯಕರ್ತರು ಅಪಹರಿಸಿದರು. ಇಬ್ಬರನ್ನೂ ಟಿಎಂಸಿ ನಾಯಕರೊಬ್ಬರ ನಿವಾಸದಲ್ಲಿ ಇರಿಸಲಾಗಿದೆ ಎಂಬ ಮಾಹಿತಿಯಿದೆ, ಅವರನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ  ಮನವಿ ಸಲ್ಲಿಸಲಾಗಿದೆ. ಅವರ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ,'' ಎಂದೂ ಜಯ್ ಪ್ರಕಾಶ್ ಹೇಳಿದರು.

ಮತದಾನ ಶಾಂತಿಯುತವಾಗಿ ನಡೆಯುತ್ತಿದಾಗ ಜಯ್ ಪ್ರಕಾಶ್ ಶಾಂತಿ ಕೆಡಿಸಲು ಯತ್ನಿಸಿದ್ದಾರೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ್ದಾರೆ. ಇದೇ ಕಾರಣದಿಂದ  ಕಾರ್ಯಕರ್ತರು ಆಕ್ರೋಶಗೊಂಡಿದ್ದರು  ಎಂದು ಟಿಎಂಸಿ ಹೇಳಿದೆ.

ಘಟನೆ ಕುರಿತಂತೆ ಚುನಾವಣಾ ಆಯೋಗ ವರದಿ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News