ಥೆಯ್ಯಂ ಪಾತ್ರಧಾರಿ ಜನರಿಗೆ ಹೊಡೆಯುತ್ತಿರುವ ವೀಡಿಯೊ ವೈರಲ್: ಪ್ರಕರಣ ದಾಖಲಿಸಿದ ಹಕ್ಕು ಆಯೋಗ

Update: 2019-11-25 11:29 GMT

ಕಾಸರಗೋಡು : ಕೇರಳದ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ಎಂಬಲ್ಲಿನ ಅರಯಿಲ್ ಭಗವತಿ ದೇವಸ್ಥಾನದಲ್ಲಿ  ಮೂವಲಂಕುಳಿ ಚಾಮುಂಡಿ ಥೆಯ್ಯಂ ಪಾತ್ರಧಾರಿ ಜನರಿಗೆ ಕೋಲಿನಿಂದ ಹೊಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊ ಆಧಾರದಲ್ಲಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಕಳೆದ ವಾರ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿದೆಯಲ್ಲದೆ, ಘಟನೆ ಕುರಿತಂತೆ ವರದಿಯನ್ನು 30 ದಿನಗಳೊಳಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಿದೆ.

ಯಾವುದೇ ದೂರು ದಾಖಲಾಗದೆಯೇ ಆಯೋಗ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿದ್ದು ಸಾಕಷ್ಟು ಚರ್ಚೆಗೀಡಾಗಿದೆ ಯಲ್ಲದೆ, ಧಾರ್ಮಿಕ ಪದ್ಧತಿಗಳಲ್ಲಿ ಆಯೋಗ ಹಸ್ತಕ್ಷೇಪ ನಡೆಸುವ ಅಧಿಕಾರ ಹೊಂದಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.

ಥೆಯ್ಯಂ ಎಂಬುದು ಉತ್ತರ ಕೇರಳದ ಪ್ರಾಚೀನ ಸಾಂಪ್ರದಾಯಿಕ ನೃತ್ಯ ಪದ್ಧತಿಯಾಗಿದ್ದು ಹಲವಾರು ದೇವ, ದೇವತೆಗಳು ಹಾಗೂ ದೈವಗಳನ್ನು ಈ ಮೂಲಕ  ಆರಾಧಿಸಲಾಗುತ್ತದೆ.

ವೈರಲ್ ಆಗಿರುವ ನಿರ್ದಿಷ್ಟ ವೀಡಿಯೊ ಕಾಞಗಾಡ್‍ನ ಅರಯಿಲ್ ಭಗವತಿ ದೇವಸ್ಥಾನದಲ್ಲಿನ ಆಚರಣೆಗೆ ಸಂಬಂಧಿಸಿದ್ದಾಗಿದೆ. ಇಲ್ಲಿನ ವಾರ್ಷಿಕ ಥೆಯ್ಯಂ ಜಾತ್ರೆಗೆ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ.

ಆಯೋಗ ಪ್ರಕರಣ ದಾಖಲಿಸಿರುವುದಕ್ಕೆ ಹಲವು ವಿದ್ವಾಂಸರು ವಿರೋಧ ವ್ಯಕ್ತಪಡಿಸಿದ್ದಾರೆ. "ಈ ನಿರ್ದಿಷ್ಟ ಥೆಯ್ಯಂ ರುದ್ರವಾಗಿದ್ದು  ಸಾಮಾನ್ಯವಾಗಿ ಥೆಯ್ಯಂ ಆರಂಭಗೊಂಡಾಗ ಜನರು ಹತ್ತಿರ ನಿಲ್ಲುವುದಿಲ್ಲ, ಥೆಯ್ಯಂಗೆ ಸಿಟ್ಟು ಬಂದರೆ ಭಕ್ತರಿಗೆ ಹೊಡೆಯುವ ಅಧಿಕಾರ ಹೊಂದಿದೆ ಎಂಬ ನಂಬಿಕೆಯಿದೆ. ಈಗೀಗ ನಂಬಿಕೆಯಿರಿಸದ ಕೆಲ ಮಂದಿ ಮದ್ಯ ಸೇವಿಸಿ ಥೆಯ್ಯಂ ಅನ್ನು ಅಣಕಿಸುತ್ತಾರೆ. ಹಾಗಿರುವಾಗ ಜನರಿಗೆ ಬಾರಿಸಿರಬಹುದು. ಈ ರೀತಿ ಹಲವೆಡೆ ಆಗುತ್ತಿದೆ" ಎಂದು ಕ್ಯಾಲಿಕಟ್ ವಿವಿಯ ಮಾಜಿ ಪ್ರೊಫೆಸರ್ ರಾಘವನ್ ಪಯ್ಯನಾಡ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News