×
Ad

ನೂತನ ಸಮವಸ್ತ್ರ ಕುರಿತು ವಿವಾದದ ಬಳಿಕ ಭಾರತೀಯ ವೇಷಭೂಷಣಕ್ಕೆ ಮರಳಿದ ರಾಜ್ಯಸಭಾ ಮಾರ್ಷಲ್‌ಗಳು

Update: 2019-11-25 20:54 IST

ಹೊಸದಿಲ್ಲಿ, ನ.25: ತಮ್ಮ ಮಿಲಿಟರಿ ಶೈಲಿಯ ಸಮವಸ್ತ್ರ ವಿವಾದವನ್ನು ಸೃಷ್ಟಿಸಿದ ಒಂದು ವಾರದ ಬಳಿಕ,ಸೋಮವಾರ ರಾಜ್ಯಸಭೆಯ ಮಾರ್ಷಲ್‌ಗಳು ಮತ್ತೆ ಸಾಂಪ್ರದಾಯಿಕ ಭಾರತೀಯ ಉಡುಪುಗಳಲ್ಲಿ ಕಾಣಿಸಿಕೊಂಡರು. ಆದರೆ ತಲೆಯ ಮೇಲೆ ಹಿಂದಿರುತ್ತಿದ್ದ ಪಗಡಿ ಮಾತ್ರ ಮಾಯವಾಗಿತ್ತು.

ಸಭಾಪತಿಗಳ ಪೀಠದ ಅಕ್ಕಪಕ್ಕದಲ್ಲಿರುವ ಇಬ್ಬರು ಮಾರ್ಷಲ್‌ಗಳು ಗಾಢವರ್ಣದ ‘ಬಂದ್‌ಗಲಾ’ ಧರಿಸಿ ಸದನಕ್ಕೆ ಆಗಮಿಸಿದಾಗ ‘ಅತ್ಯಂತ ಸುಂದರ’ ಎಂದು ಕಾಂಗ್ರೆಸ ಸದಸ್ಯರೋರ್ವರು ಪ್ರತಿಕ್ರಿಯಿಸಿದರು.

ರಾಜ್ಯಸಭೆಯು ಕಳೆದ ಸೋಮವಾರ ತನ್ನ 250ನೇ ಅಧಿವೇಶನವನ್ನು ಆರಂಭಿಸಿದಾಗ ಮಾರ್ಷಲ್‌ಗಳು ಪೇಟವನ್ನೊಳಗೊಂಡ ಭಾರತೀಯ ಸಾಂಪ್ರದಾಯಿಕ ಉಡುಗೆಯ ಬದಲು ಕ್ಯಾಪ್‌ಗಳೊಂದಿಗೆ ಮಿಲಿಟರಿ ಶೈಲಿಯ ನೂತನ ಸಮವಸ್ತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ನೂತನ ಸಮವಸ್ತ್ರವನ್ನು ಕೆಲವು ಸದಸ್ಯರು ಟೀಕಿಸಿದ್ದರು. ನಾವು ‘ಮಾರ್ಷಲ್ ಲಾ ’ಯುಗವನ್ನು ಪ್ರವೇಶಿಸುತ್ತಿದ್ದೇವೆ ಎಂಬಂತೆ ಕಂಡುಬರುತ್ತಿದೆ ’ಎಂದು ಕಾಂಗ್ರೆಸ್‌ನ ಜೈರಾಮ ರಮೇಶ ಹೇಳಿದ್ದರು.

ಕೆಲವು ವರ್ಗಗಳಿಂದ ಟೀಕೆಗಳ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ನ.19ರಂದು ಸಮವಸ್ತ್ರ ಬದಲಾವಣೆಯ ಪುನರ್‌ಪರಿಶೀಲನೆಗೆ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News