‘ಮೆಕ್‌ಮಾಫಿಯಾ’ಗೆ ಎಮಿ ಅವಾರ್ಡ್: ಮಿಂಚಿದ ನವಾಝುದ್ದೀನ್ ಸಿದ್ದೀಕಿ

Update: 2019-11-26 12:49 GMT
ಫೋಟೊ ಕೃಪೆ: twitter.com/Nawazuddin_S

ಹೊಸದಿಲ್ಲಿ, ನ.26: 47ನೇ ಅಂತರರಾಷ್ಟ್ರೀಯ ಎಮಿ ಪ್ರಶಸ್ತಿಗಳನ್ನು ಸೋಮವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ವರ್ಣರಂಜಿತ ಸಮಾರಂಭದಲ್ಲಿ ಘೋಷಿಸಲಾಗಿದೆ. ಐದು ಪ್ರತ್ಯೇಕ ವಿಭಾಗಗಳಲ್ಲಿ ಭಾರತವು ನಾಮಕರಣ ಪಡೆದಿತ್ತಾದರೂ ಅಂತಿಮವಾಗಿ ಪ್ರಶಸ್ತಿಗಳು ಕೈತಪ್ಪಿವೆ. ಆದರೆ ಇದಕ್ಕಾಗಿ ನಿರಾಶರಾಗಬೇಕಿಲ್ಲ, ಏಕೆಂದರೆ ಬೆಸ್ಟ್ ಡ್ರಾಮಾ ಸೀರಿಸ್ ವಿಭಾಗದಲ್ಲಿ ಪ್ರಶಸ್ತಿಗೆ ಬಾಲಿವುಡ್ ನಟ ನವಾಝುದ್ದೀನ್ ಸಿದ್ದೀಕಿ ಪಾಲುದಾರರಾಗಿದ್ದಾರೆ.

ಹೌದು,ಸಿದ್ದೀಕಿ ಬೆಸ್ಟ್ ಡ್ರಾಮಾ ಸೀರಿಸ್ ವಿಭಾಗದಲ್ಲಿ ನಾಮಿನೇಶನ್ ಪಡೆದು ಪ್ರಶಸ್ತಿಗೆ ಪರಸ್ಪರ ಸ್ಪರ್ಧಿಗಳಾಗಿದ್ದ ಎರಡು ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ಏಕೈಕ ನಟ ಎಂಬ ಹೆಗ್ಗಳಿಕೆಯೊಡನೆ ನ್ಯೂಯಾರ್ಕ್‌ಗೆ ತೆರಳಿದ್ದರು. ಸಮಾರಂಭದಲ್ಲಿ ಭಾರತದ ‘ಸೇಕ್ರೆಡ್ ಗೇಮ್ಸ್’ ತಂಡದೊಂದಿಗೆ ಕೆಂಪು ರತ್ನಗಂಬಳಿಯ ಮೇಲೆ ಹೆಜ್ಜೆಗಳನ್ನು ಹಾಕಿದ್ದ ಸಿದ್ದೀಕಿ ಬೆಸ್ಟ್ ಡ್ರಾಮಾ ಸೀರಿಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡ ಬ್ರಿಟನ್ ಟಿವಿ ಧಾರಾವಾಹಿ ‘ಮೆಕ್ ಮಾಫಿಯಾ’ದ ವಿಜೇತ ತಂಡದೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು.

ಸಿದ್ದೀಕಿ (45) ‘ಸೇಕ್ರೆಡ್ ಗೇಮ್ಸ್’ ಮತ್ತು ‘ಮೆಕ್‌ಮಾಫಿಯಾ’ ಈ ಎರಡೂ ಟಿವಿ ಧಾರಾವಾಹಿಗಳಲ್ಲಿ ಗ್ಯಾಂಗ್‌ಸ್ಟರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸೇಕ್ರೆಡ್ ಗೇಮ್ಸ್‌ನಲ್ಲಿ ಮಾಫಿಯಾ ಡಾನ್ ಗಣೇಶ ಗಾಯತೊಂಡೆ ಆಗಿದ್ದರೆ ಮೆಕ್‌ಮಾಫಿಯಾದಲ್ಲಿ ರಷ್ಯದ ಭೂಗತ ಜಗತ್ತಿನ ದೊರೆಯ ಲಂಡನ್‌ನಲ್ಲಿ ನೆಲೆಸಿರುವ ಪುತ್ರನ ಭಾರತೀಯ ಪಾಲುದಾರ ಡಿಲ್ಲಿ ಮಹಮೂದ್ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಪ್ರಶಸ್ತಿ ಘೋಷಣೆಗೆ ಮುನ್ನ ತನ್ನ ಸೇಕ್ರೆಡ್ ಗೇಮ್ಸ್ ಸಹನಟಿಯರಾದ ಕುಬ್ರಾ ಸೇಟ್ ಮತ್ತು ರಾಧಿಕಾ ಆಪ್ಟೆ ಹಾಗೂ ನಿರ್ದೇಶಕರಾದ ಅನುರಾಗ್ ಕಶ್ಯಪ್ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ಅವರೊಂದಿಗೆ ಸಭಾಂಗಣದಲ್ಲಿ ಸುಳಿದಾಡುತ್ತಿದ್ದ ಸಿದ್ದೀಕಿ ಪ್ರಶಸ್ತಿ ಘೋಷಣೆಯ ಬಳಿಕ ಮೆಕ್‌ಮಾಫಿಯಾದ ನಿರ್ದೇಶಕ ಜೇಮ್ಸ್ ವಾಟ್ಕಿನ್ಸ್ ಮತ್ತು ನಿರ್ಮಾಪಕ ಡಿಕ್ಸಿ ಲಿಂಡರ್ ಅವರೊಂದಿಗೆ ಸಂಭ್ರಮವನ್ನು ಆಚರಿಸಿದರು.

‘ಮೆಕ್‌ಮಾಫಿಯಾ’ಕ್ಕಾಗಿ ನನ್ನ ಮೆಚ್ಚಿನ ನಿರ್ದೇಶಕರಲ್ಲೋರ್ವರಾಗಿರುವ ಜೇಮ್ಸ್ ವಾಟ್ಕಿನ್ಸ್ ಜೊತೆ ವರ್ಣರಂಜಿತ ಅಂತರರಾಷ್ಟ್ರೀಯ ಎಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಂದರವಾದ ಪ್ರಶಸ್ತಿ ಟ್ರೋಫಿಯನ್ನು ಸ್ವೀಕರಿಸಿದ್ದು ಅತ್ಯಂತ ಸಂತಸದ ಅನುಭವವಾಗಿತ್ತು ಎಂದು ಸಿದ್ದೀಕಿ ತನ್ನ ಮೆಕ್‌ಮಾಫಿಯಾದ ಸಹನಟರಿಗೆ ಟ್ಯಾಗ್ ಮಾಡಿ ಟ್ವೀಟಿಸಿದ್ದಾರೆ.

2018 ಜನವರಿಯಲ್ಲಿ ಬ್ರಿಟನ್‌ನಲ್ಲಿ ಬಿಬಿಸಿ ಮತ್ತು ಅಮೆರಿಕದಲ್ಲಿ ಎಎಂಸಿ ವಾಹಿನಿಗಳಲ್ಲಿ ಪ್ರಸಾರ ಆರಂಭಿಸಿದ್ದ ಮೆಕ್‌ಮಾಫಿಯಾ ಭಾರತದಲ್ಲಿ ಝೀ ಕೆಫೆ ವಾಹಿನಿಯಲ್ಲಿ ಪ್ರಸಾರಗೊಂಡಿತ್ತು. ಸೀಸನ್ 1ರಲ್ಲಿ ಎಂಟು ಎಪಿಸೋಡ್‌ಗಳ ಸರಣಿ ಪ್ರಸಾರಗೊಂಡಿದ್ದು,ಸೀಸನ್ 2ನ್ನು ಆರಂಭಿಸುವುದಾಗಿ ಬಿಬಿಸಿ ಪ್ರಕಟಿಸಿದೆ. ಆದರೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ.

ಎಮಿ ಪ್ರಶಸ್ತಿಗಳಿಗೆ ಭಾರತದಿಂದ ಬೆಸ್ಟ್ ಡ್ರಾಮಾ ಸೀರಿಸ್ ವಿಭಾಗದಲ್ಲಿ ಸೇಕ್ರೆಡ್ ಗೇಮ್ಸ್,ಅತ್ಯುತ್ತಮ ನಟಿ ವಿಭಾಗದಲ್ಲಿ ರಾಧಿಕಾ ಆಪ್ಟೆ,ಬೆಸ್ಟ್ ನಾನ್-ಸ್ಕ್ರಿಪ್ಟೆಡ್ ಎಂಟರ್‌ಟೇನ್‌ಮೆಂಟ್ ವಿಭಾಗದಲ್ಲಿ ರಿಮಿಕ್ಸ್,ಟಿವಿ ಮೂವಿ/ಮಿನಿ ಸೀರಿಸ್ ವಿಭಾಗದಲ್ಲಿ ‘ಲಸ್ಟ್ ಸ್ಟೋರೀಸ್’ ಮತ್ತು ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ‘ವಿಟ್ನೆಸ್:ಇಂಡಿಯಾಸ್ ಫಾರಬಿಡನ್ ಲವ್’ ನಾಮಕರಣಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News