ಪಕ್ಷದ ಸೂಚನೆ ಮೀರಿದ ಶಾಸಕಿಯ ಅನರ್ಹತೆಗೆ ಕಾಂಗ್ರೆಸ್ ನಿರ್ಧಾರ
ಲಕ್ನೊ, ನ.27: ಬಿಜೆಪಿ ನೇತೃತ್ವದ ಸರಕಾರ ಆಯೋಜಿಸಿದ್ದ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಬಾರದು ಎಂದು ಸೂಚಿಸಿ ನೀಡಿದ್ದ ವ್ಹಿಪ್ ಉಲ್ಲಂಘಿಸಿದ ಕಾರಣ ರಾಯ್‌ಬರೇಲಿಯ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್‌ರನ್ನು ಶಾಸಕತ್ವದಿಂದ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಪಕ್ಷ ಉ.ಪ್ರದೇಶ ವಿಧಾನಸಭೆಯ ಸ್ಪೀಕರ್‌ಗೆ ಪತ್ರ ಬರೆದಿದೆ.
ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ ಉ.ಪ್ರದೇಶದ ಆದಿತ್ಯನಾಥ್ ನೇತೃತ್ವದ ಸರಕಾರ ಅಕ್ಟೋಬರ್ 2ರಂದು ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಿತ್ತು. ಇದನ್ನು ಬಹಿಷ್ಕರಿಸಬೇಕೆಂದು ಕಾಂಗ್ರೆಸ್ ತನ್ನ ಎಲ್ಲಾ ಸದಸ್ಯರಿಗೂ ವ್ಹಿಪ್ ಜಾರಿಗೊಳಿಸಿತ್ತು. ಆದರೂ ಶಾಸಕಿ ಅದಿತಿ ಸಿಂಗ್ ಪಾಲ್ಗೊಂಡಿದ್ದರು.
ಅಲ್ಲದೆ, ರಾಯ್‌ಬರೇಲಿಯಲ್ಲಿ ಅಕ್ಟೋಬರ್ 22ರಿಂದ 24ರವರೆಗೆ ನಡೆದ ಪಕ್ಷದ ತರಬೇತಿ ಶಿಬಿರಕ್ಕೂ ಅದಿತಿ ಸಿಂಗ್ ಗೈರು ಹಾಜರಾಗಿದ್ದರು. ಈ ಬಗ್ಗೆ ವಿವರಣೆ ಕೇಳಿದ ನೋಟಿಸ್‌ಗೂ ಉತ್ತರಿಸಿಲ್ಲ. ಆದ್ದರಿಂದ ನಿಯಮದಂತೆ, ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೋರಿ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ ಎಂದು ಉತ್ತರಪ್ರದೇಶ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ಆರಾಧನಾ ಮಿ ಶ್ರಾ ಹೇಳಿದ್ದಾರೆ.