ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧಗಳಿಂದಾಗಿ ನಷ್ಟದ ನಿರ್ದಿಷ್ಟ ವರದಿಯಿಲ್ಲ: ಕೇಂದ್ರ
ಹೊಸದಿಲ್ಲಿ, ನ.27: ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಹೇರಲಾಗಿದ್ದ ನಿರ್ಬಂಧಗಳಿಂದಾಗಿ ಆದಾಯ ಅಥವಾ ಉದ್ಯೋಗಗಳಲ್ಲಿ ಯಾವುದೇ ಹೊಸ ನಷ್ಟದ ಕುರಿತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಿಂದ ನಿರ್ದಿಷ್ಟ ವರದಿಯನ್ನು ಸ್ವೀಕರಿಸಿಲ್ಲ ಎಂದು ಸರಕಾರವು ತಿಳಿಸಿದೆ.
ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ವಿಷಯವನ್ನು ತಿಳಿಸಿದ ಸಹಾಯಕ ಗೃಹಸಚಿವ ಜಿ.ಕಿಶನ್ ರೆಡ್ಡಿ ಅವರು,ಜಮ್ಮು-ಕಾಶ್ಮೀರದ ಜನರು ಹಲವಾರು ದಶಕಗಳಿಂದಲೂ ಗಡಿಯಾಚೆಯಿಂದ ಬೆಂಬಲಿತ ಭಯೋತ್ಪಾದಕ ಹಿಂಸೆ ಮತ್ತು ಪ್ರತ್ಯೇಕತಾವಾದದಿಂದ ನಲುಗಿದ್ದಾರೆ ಮತ್ತು 35-ಎ ವಿಧಿಯಿಂದಾಗಿ ಕೆಲವು ಸಾಂವಿಧಾನಿಕ ಸೌಲಭ್ಯಗಳಿಂದ ವಂಚಿತರಾಗಿದ್ದರು ಎಂದು ಹೇಳಿದರು.
ದಶಕಗಳ ಭಯೋತ್ಪಾದನೆಯಿಂದ ರಾಜ್ಯಕ್ಕೆ ಉಂಟಾಗಿದ್ದ ನಷ್ಟದ ಕುರಿತು ಮಾತನಾಡಿದ ಅವರು, ದೇಶದ ಇತರ ಭಾಗಗಳಲ್ಲಿಯ ಜನರು ಅನುಭವಿಸುತ್ತಿರುವ ಭಾರತೀಯ ಸಂವಿಧಾನದಲ್ಲಿ ಹೇಳಲಾಗಿರುವ ಪೂರ್ಣ ಹಕ್ಕುಗಳು ಮತ್ತು ವಿವಿಧ ಕೇಂದ್ರೀಯ ಕಾನೂನುಗಳ ಲಾಭಗಳನ್ನು ಆಗಿನ ಜಮ್ಮು-ಕಾಶ್ಮೀರ ರಾಜ್ಯದ ಜನತೆಗೆ ನಿರಾಕರಿಸಲಾಗಿತ್ತು. ಇದರ ಪರಿಣಾಮವಾಗಿ ಕಳೆದ 70 ವರ್ಷಗಳಿಂದಲೂ ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಜನತೆಗೆ ಪ್ರದೇಶದ ಸಂಪೂರ್ಣ ಆರ್ಥಿಕ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದರು.