ಪರಿಶುದ್ಧ ಪರಿಸರಕ್ಕಾಗಿ ಪರಿಣಾಮಕಾರಿ ಕ್ರಮಗಳು ಬೇಕಾಗಿದೆ

Update: 2019-11-27 18:24 GMT

ಮಾನ್ಯರೇ,

ಕೆಲವು ವರ್ಷಗಳಿಂದೀಚೆಗೆ ಭೂಮಿಯ ವಾತಾವರಣ ಭಾರೀ ದೊಡ್ಡ ಪ್ರಮಾಣದಲ್ಲಿ ಮಲಿನಗೊಂಡಿದೆ. ಇದರ ಫಲವಾಗಿ ಹವಾಮಾನದ ವೈಪರೀತ್ಯಗಳು ತುಂಬ ಹೆಚ್ಚಾಗಿದ್ದು ಪಶುಪಕ್ಷಿಗಳು, ಗಿಡಮರಗಳು ಮತ್ತು ಮಾನವಕುಲದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳು ಉಂಟಾಗುತ್ತಿವೆ. ಈ ಅಭೂತಪೂರ್ವ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣ ವಾಹನಗಳು, ಕೈಗಾರಿಕೆಗಳು, ನಿರ್ಮಾಣ ಕಾರ್ಯಗಳು ಮತ್ತು ಒಣಹುಲ್ಲು ಸುಡುವಿಕೆಗಳೆಂದು ಸಂಶೋಧನೆಗಳು ಹೇಳುತ್ತಿವೆ. ಅಂಕಿಅಂಶಗಳ ಪ್ರಕಾರ ವಾಯುಮಾಲಿನ್ಯದ ಹೆಚ್ಚಳಕ್ಕೆ ಶೇಕಡಾ 25ರಷ್ಟು ಕೊಡುಗೆ ವಾಹನಗಳಿಂದಲೇ ಬರುತ್ತಿದೆ. ಅಭಿವೃದ್ಧಿ ಹೊಂದಿರುವ ದೇಶಗಳು ಈಗಾಗಲೇ ಎಚ್ಚೆತ್ತುಕೊಂಡು ಸೂಕ್ತ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿವೆ.

ಉದಾಹರಣೆಗೆ ಲಂಡನ್‌ನಲ್ಲಿ ಬೆಳಗ್ಗೆ 7ರಿಂದ ಸಂಜೆ 6ರ ತನಕ ನಗರದ ಕೇಂದ್ರ ಭಾಗಕ್ಕೆ ಬರುವ ಎಲ್ಲಾ ವಾಹನಗಳಿಗೆ 11.5 ಪೌಂಡು (ಸುಮಾರು ರೂ. 1,098) ಶುಲ್ಕ ವಿಧಿಸಲಾಗುತ್ತಿದೆ. ಎಪ್ರಿಲ್ ನಂತರ ಎಲ್ಲ ಹಳೆ ಮಾದರಿಯ ಅನಿಲ, ಡೀಸೆಲ್-ಚಾಲಿತ ಕಾರು, ಲಾರಿ, ದ್ವಿಚಕ್ರಿಗಳು 24 ಪೌಂಡುಗಳಷ್ಟು (ಸುಮಾರು ರೂ. 2,208) ದಂಡ ವಿಧಿಸಲಾಗುತ್ತಿದೆ. ಇದರೊಂದಿಗೆ ಲೈಸನ್ಸ್ ನೀಡುವಿಕೆಯನ್ನೂ ಕಠಿಣಗೊಳಿಸಲಾಗಿದೆ. ಬ್ರಿಟನ್‌ನಲ್ಲಿ ಹೀಗಿದ್ದರೆ ಚೀನಾದಲ್ಲಿ ಲೈಸನ್ಸ್ ಪ್ಲೇಟ್ ನೀಡಲು ಲಾಟರಿ ವ್ಯವಸ್ಥೆಯೊಂದನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ವಿದ್ಯುತ್-ಚಾಲಿತ ವಾಹನಗಳಿಗೇ ಅಧಿಕ ಆದ್ಯತೆ ನೀಡಲಾಗಿದೆ. ಇದಲ್ಲದೆ ತೈಲ ಹಾಗೂ ಅನಿಲ-ಚಾಲಿತ ವಾಹನಗಳಿಗೆ ವಾರದ ಒಂದು ದಿನ ಕಡ್ಡಾಯ ರಜೆ ನೀಡಲೇಬೇಕಾಗಿದೆ! ಅತ್ತ ಸ್ಪೇನ್‌ನ ಮ್ಯಾಡ್ರಿಡ್ ನಗರದಲ್ಲಿ ವಿಶ್ವದ ಅತ್ಯಂತ ಕಠಿಣ ನಿರ್ಬಂಧಗಳಲ್ಲೊಂದನ್ನು ಹೇರಲಾಗಿದೆ. ಅಲ್ಲಿ ಈಗ ಹೆಚ್ಚಿನ ಸಾಂಪ್ರದಾಯಿಕ ಇಂಧನದ ಕಾರುಗಳಿಗೆ ನಗರ ಕೇಂದ್ರದ ಒಂದು ಭಾಗಕ್ಕೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸುವವರು ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ.

ಭಾರತದ ರಾಜಧಾನಿ ದಿಲ್ಲಿಯಲ್ಲಿ ಈಗ ಹಾಹಾಕಾರವೇ ಎದ್ದಿದೆ. ಅಲ್ಲಿನ ವಾತಾವರಣ ಎಷ್ಟು ಕೆಟ್ಟುಹೋಗಿದೆ ಎಂದರೆ ಆಮ್ಲಜನಕ ಬಾರುಗಳನ್ನು ತೆರೆಯುವ ಮಟ್ಟಿಗೆ, ಶಾಲೆಗಳಿಗೆ ರಜೆ ಸಾರುವ ಮಟ್ಟಿಗೆ. ದೇಶದ ಇನ್ನಿತರ ನಗರಗಳು ಮತ್ತು ಪಟ್ಟಣಗಳ ಸ್ಥಿತಿಯೂ ಗಂಭೀರವಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ ಜನಹಿತವನ್ನು, ಪರಿಸರದ ಆರೋಗ್ಯವನ್ನು ಕಾಪಾಡುವಲ್ಲಿ ನಿಜವಾಗಿ ಆಸಕ್ತಿ ಇದೆಯೆಂದಾದರೆ ಅವರು ಪಕ್ಷಭೇದ ಮರೆತು, ಪರಸ್ಪರರ ಮೇಲೆ ಕೆಸರೆರಚುವುದನ್ನು ಕೈಬಿಟ್ಟು ಪರಿಶುದ್ಧ ವಾತಾವರಣ ಮತ್ತು ಪರಿಸರಕ್ಕಾಗಿ ಶೀಘ್ರ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸರಕಾರಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು.

Writer - -ಸುರೇಶ್ ಭಟ್, ಬಾಕ್ರಬೈಲ್

contributor

Editor - -ಸುರೇಶ್ ಭಟ್, ಬಾಕ್ರಬೈಲ್

contributor

Similar News