ಪಶ್ಚಿಮ ಬಂಗಾಳ: ವಿಧಾನಸಭಾ ಉಪಚುನಾವಣೆಯಲ್ಲಿ ಟಿಎಂಸಿ ಕ್ಲೀನ್ ಸ್ವೀಪ್, ಬಿಜೆಪಿಗೆ ಮುಖಭಂಗ

Update: 2019-11-28 15:04 GMT

ಕೋಲ್ಕತಾ, ನ.28: ಪಶ್ಚಿಮ ಬಂಗಾಳದ ಮೂರು ವಿಧಾನಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆಲುವು ಸಾಧಿಸುವುದರೊಂದಿಗೆ ಬಿಜೆಪಿಗೆ ಮುಖಭಂಗವಾಗಿದೆ.

ಇದು ಜನತೆಯ ಗೆಲುವಾಗಿದೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಸಂದ ಗೆಲುವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ದುರಹಂಕಾರದ ರಾಜಕೀಯವನ್ನು ಜನತೆ ತಿರಸ್ಕರಿಸಿದ್ದಾರೆ. ಇದೇ ಪ್ರಥಮ ಬಾರಿಗೆ ನಾವು ಖರಗಪುರ ಮತ್ತು ಕಾಲಿಯಾಗಂಜ್‌ನಲ್ಲಿ ಗೆದ್ದಿದ್ದೇವೆ. ಅಲ್ಪಸಂಖ್ಯಾತರು, ಆದಿವಾಸಿಗಳು, ರಾಜ್‌ಭನ್ಷಿ ಸಮುದಾಯದವರು, ಎಲ್ಲರೂ ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕಾಲಿಯಾಗಂಜ್ ಕ್ಷೇತ್ರದಲ್ಲಿ ಟಿಎಂಸಿಯ ತಪನ್‌ದೇಬ್ ಸಿನ್ಹ ಬಿಜೆಪಿಯ ಕಮಲ್‌ ಚಂದ್ರ ಸರ್ಕಾರ್‌ರನ್ನು 2,418 ಮತಗಳ ಅಂತರದಿಂದ ಸೋಲಿಸಿದರು.

ಖರಗ್‌ಪುರ ಸದರ್ ಕ್ಷೇತ್ರವನ್ನು ಬಿಜೆಪಿಯಿಂದ ಟಿಎಂಸಿ ಕಿತ್ತುಕೊಂಡಿದೆ . ಇಲ್ಲಿ ಟಿಎಂಸಿಯ ಪ್ರದೀಪ್ ಸರ್ಕಾರ್ ಬಿಜೆಪಿಯ ಪ್ರೇಮ್‌ ಚಂದ್ರ ಝಾರನ್ನು 20,811 ಮತಗಳಿಂದ ಸೋಲಿಸಿದರು.

ಕರೀಂಪುರದಲ್ಲಿ ಟಿಎಂಸಿಯ ಬಿಮಲೇಂದು ಸಿನ್ಹ ರಾಯ್ ತನ್ನ ಸಮೀಪದ ಪ್ರತಿಸ್ಪರ್ಧಿ , ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಜಯಪ್ರಕಾಶ್ ಮಜೂಮ್ದಾರ್‌ರನ್ನು 23,650 ಮತಗಳ ಅಂತರದಿಂದ ಸೋಲಿಸಿದರು. ಇತ್ತೀಚೆಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಲಿಯಾಗಂಜ್ ಮತ್ತು ಖರಗ್‌ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಗಮನಾರ್ಹ ಮುನ್ನಡೆ ದಾಖಲಿಸಿತ್ತು.

ಖರಗಪುರ ಸದರ್ ಕ್ಷೇತ್ರದ ಶಾಸಕರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸಂಸದರಾಗಿ ಆಯ್ಕೆಯಾದ್ದರಿಂದ ಈ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ರಾಜ್ಯ ಸರಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಘೋಷ್ ಆರೋಪಿಸಿದ್ದಾರೆ. ಚುನಾವಣೆ ಸಂದರ್ಭ ರಾಜ್ಯದಲ್ಲಿ ಕೇಂದ್ರದ ಭದ್ರತಾ ಪಡೆಗಳ ಮುಕ್ತ ಕಾರ್ಯಾಚರಣೆಗೆ ಅವಕಾಶ ನೀಡಿಲ್ಲ. ಉಪಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದ ಮೇಲೆ ಸುದೀರ್ಘಾವಧಿಯ ಪರಿಣಾಮ ಬೀರುವುದಿಲ್ಲ ಎಂದಿರುವ ಅವರು , ಚುನಾವಣೆಯ ಸೋಲಿನ ಹೊಣೆಯನ್ನು ತಾನು ಹೊರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News