ಭಾರತದಲ್ಲಿ ಸರಕಾರಿ ಪ್ರಾಯೋಜಿತ ಸೈಬರ್ ದಾಳಿ ಬಗ್ಗೆ 500 ಮಂದಿಗೆ ಗೂಗಲ್ ಎಚ್ಚರಿಕೆ

Update: 2019-11-28 15:02 GMT

ಹೊಸದಿಲ್ಲಿ, ನ.28: ಈ ವರ್ಷದ ಜುಲೈಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಸರಕಾರ ಬೆಂಬಲಿತ ಸೈಬರ್ ಹ್ಯಾಕರ್‌ಗಳ ಬಗ್ಗೆ ತನ್ನ ಬಳಕೆದಾರರಿಗೆ 12000 ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ಗೂಗಲ್ ತಿಳಿಸಿದೆ.

50ಕ್ಕೂ ಹೆಚ್ಚು ದೇಶಗಳಲ್ಲಿ ಸರಕಾರ ಬೆಂಬಲಿತ 270ಕ್ಕೂ ಹೆಚ್ಚು ಸೈಬರ್ ದಾಳಿಕೋರ ಗುಂಪುಗಳನ್ನು ಗೂಗಲ್‌ನ ‘ಬೆದರಿಕೆ ವಿಶ್ಲೇಷಣೆ ತಂಡ’ ಪತ್ತೆಹಚ್ಚಿದೆ ಎಂದು ತಂಡದ ಸದಸ್ಯ ಶೇನ್ ಹಂಟ್ಲೆ ಹೇಳಿದ್ದಾರೆ. ಗ್ರಾಹಕರ ಮೇಲೆ ಆ ದೇಶದ ಸರಕಾರ ಕಳ್ಳಗಣ್ಣು ಇಟ್ಟಿತ್ತೇ ಅಥವಾ ಅನ್ಯದೇಶದ ಸರಕಾರವೇ ಎಂಬ ಬಗ್ಗೆ ಈ ವಿಶ್ಲೇಷಣೆಯಲ್ಲಿ ಉಲ್ಲೇಖಿಸಲಾಗಿಲ್ಲ.

ಗುಪ್ತ ಮಾಹಿತಿ ಸಂಗ್ರಹಿಸುವ ಜೊತೆಗೆ ಭಿನ್ನಮತೀಯರು ಮತ್ತು ಹೋರಾಟಗಾರರನ್ನು ಗುರಿಯಾಗಿಸುವುದು ಈ ಸೈಬರ್ ದಾಳಿಕೋರರ ಉದ್ದೇಶವಾಗಿದೆ. ಜೊತೆಗೆ ವಿನಾಶಕಾರಿ ಸೈಬರ್ ದಾಳಿಯೂ ನಡೆದಿದೆ ಎಂದು ವಿಶ್ಲೇಷಣೆ ತಿಳಿಸಿದೆ.

1000ಕ್ಕೂ ಅಧಿಕ ಎಚ್ಚರಿಕೆ ಸಂದೇಶ ಸ್ವೀಕರಿಸಿದ ಅಮೆರಿಕ ಅಗ್ರಸ್ಥಾನದಲ್ಲಿದೆ. ಭಾರತವು 100ರಿಂದ 500 ಸಂದೇಶ ಸ್ವೀಕರಿಸಿದ ದೇಶಗಳ ಪಟ್ಟಿಯಲ್ಲಿದ್ದರೆ, ವಿಯೆಟ್ನಾಮ್, ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾ 500ರಿಂದ 1000ದ ಪಟ್ಟಿಯಲ್ಲಿದೆ.

ಗೂಗಲ್ ಎಚ್ಚರಿಕೆ ಸಂದೇಶ ಕಳುಹಿಸಿರುವ ಬಳಕೆದಾರರಲ್ಲಿ 90%ಕ್ಕೂ ಹೆಚ್ಚು ಬಳಕೆದಾರರು ಮಾಲ್‌ವೇರ್ ಅಥವಾ ‘ಫಿಶಿಂಗ್ ಇಮೇಲ್’ನ ಬಲೆಗೆ ಬಿದ್ದಿದ್ದಾರೆ. ಫಿಶಿಂಗ್ ಇಮೇಲ್ ಮೂಲಕ ಬಳಕೆದಾರರ ಪಾಸ್‌ವರ್ಡ್ ಅಥವಾ ಬ್ಯಾಂಕ್ ಖಾತೆಯ ಇತರ ಮಾಹಿತಿ ಪಡೆದು ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಲಾಗುತ್ತದೆ ಎಂದು ತಿಳಿಸಿರುವ ಗೂಗಲ್, ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು ಮತ್ತು ರಾಜಕೀಯ ಪ್ರಚಾರಕರು ಸುಧಾರಿತ ಸುರಕ್ಷಾ ವ್ಯವಸ್ಥೆಯಲ್ಲಿ ದಾಖಲಾತಿ ಪಡೆಯುವಂತೆ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News