ಆರ್ಥಿಕ ವರ್ಷ 2014ರಿಂದ 2018: ನಿರುದ್ಯೋಗ ಪ್ರಮಾಣ ಎರಡು ಪಟ್ಟು ಹೆಚ್ಚಳ ಎಂದು ಒಪ್ಪಿಕೊಂಡ ಕೇಂದ್ರ

Update: 2019-11-28 15:33 GMT

ಹೊಸದಿಲ್ಲಿ, ನ.29: 2013-14ರ ಸಾಲಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.2.9 ರಷ್ಟಿದ್ದ ನಿರುದ್ಯೋಗದ ಪ್ರಮಾಣವು 2017-18ರಲ್ಲಿ ಶೇ.5.3ಕ್ಕೇರಿದೆ. ಇದೇ ಅವಧಿ ಯಲ್ಲಿ ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣದಲ್ಲಿ ಶೇ.50ರಷ್ಟು ಏರಿಕೆಯಾಗಿದೆ. ಇದಕ್ಕಿಂತಲೂ ಮಿಗಿಲಾಗಿ ನಗರ ಪ್ರದೇಶದ ಪುರುಷರ ನಿರುದ್ಯೋಗದ ಪ್ರಮಾಣವು 2015-16ರ ಸಾಲಿನಲ್ಲಿ ಶೇ.3ರಷ್ಟಿದ್ದುದು ಕೇವಲ 2 ವರ್ಷಗಳ ಅವಧಿಯಲ್ಲಿ ಅದರೆ 2017-18ರ ಅವಧಿಯಲ್ಲಿ ಶೇ.6.9ಕ್ಕೆ ಏರಿಕೆಯಾಗಿದೆ.

ರಾಜ್ಯಸಭೆಯಲ್ಲಿ ಗುರುವಾರ ಕಾಂಗ್ರೆಸ್ ಸಂಸದ ಕುಮಾರ್ ಕೇತ್ಕರ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕಾರ್ಮಿಕ ಕಲ್ಯಾಣ ಹಾಗೂ ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ನಗರ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರಮಾಣವು ಈ ಅವಧಿಯಲ್ಲಿ ಶೇ. 4.9ರಿಂದ ಶೇ.7.7ಕ್ಕೆ ಏರಿಕೆ ಕಂಡಿದೆಯೆಂದು ಹೇಳಿದರು.

ಅಂಕಿಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯು 2017-18ರ ಅವಧಿಯಲ್ಲಿ ನಡೆಸಿದ ಕಾರ್ಮಿಕ ಶಕ್ತಿ ಸಮೀಕ್ಷೆಯಲ್ಲಿ ಲಭ್ಯವಾದ ಫಲಿತಾಂಶವನ್ನು ಈ ದತ್ತಾಂಶವು ಆಧರಿಸಿದೆ.

ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರಮಾಣವು 2013-14ರಲ್ಲಿ ಶೇ.2.9ರಷ್ಟಿದ್ದುದು 2015-16ರಲ್ಲಿ ಶೇ.3.4 ಹಾಗೂ 2017-18ರಲ್ಲಿ ಶೇ.5.3ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರಮಾಣವು 2013-14ರಲ್ಲಿ ಶೇ.4.9ರಿದ್ದುದು, 2015-16ರಲ್ಲಿ ಶೇ.4.4 ರಷ್ಟು ಹೆಚ್ಚಿತು. 2017-18ರಲ್ಲಿ ಅದು 2017-18ರಲ್ಲಿ ಅದು ಶೇ.7.7ರಷ್ಟು ತೀವ್ರ ಏರಿಕೆಯನ್ನು ಕಂಡಿರುವುದಾಗಿ ವರದಿಯು ತಿಳಿಸಿದೆ.

ಭಾರತದ ನಿರುದ್ಯೋಗದ ಪ್ರಮಾಣವು ಶೇ.8.5ಕ್ಕೆ ಏರಿಕೆಯಾಗಲು ಆರ್ಥಿಕ ಹಿಂಜರಿತ ಹಾಗೂ ಕೈಗಾರಿಕಾ ಉತ್ಪಾದನೆಯಲ್ಲಿ ಇಳಿಕೆ ಕಾರಣವೇ ಎಂದು ಕಾಂಗ್ರೆಸ್ ಸಂಸದ ಆನಂದ ಶರ್ಮಾ ಅವರು ಕೇಳಿದ ಪ್ರಶ್ನೆಗೆ ಸಚಿವ ಗಂಗ್ವಾರ್ ನೇರ ಉತ್ತರ ನೀಡದೆ, ಪಿಎಲ್‌ಎಫ್‌ಎಸ್ ಸಮೀಕ್ಷೆಯ ದತ್ತಾಂಶಗಳನ್ನು ಮಾತ್ರವೇ ಒದಗಿಸಿದರು.

2015-16 ಹಾಗೂ 2017-18ರ ಮಧ್ಯದ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಪುರುಷರಲ್ಲಿ ನಿರುದ್ಯೋಗದ ಪ್ರಮಾಣವು ಶೇ.2.9ರಿಂದ ಶೇ.5.7ಕ್ಕೇರಿದ್ದರೆ, ಗ್ರಾಮೀಣ ಮಹಿಳೆಯರ ನಿರುದ್ಯೋಗ ಪ್ರಮಾಣವು ಶೇ.4.7ರಿಂದ ಶೇ.3.8ಕ್ಕೆ ಕುಸಿದಿದೆ. ಒಟ್ಟಾರೆಯಾಗಿ ಗ್ರಾಮೀಣ ನಿರುದ್ಯೋಗ ಪ್ರಮಾಣವು ಶೇ.3.4ರಿಂದ ಶೇ.5.3ಕ್ಕೆ ಏರಿಕೆಯಾಗಿದೆ.

ನಗರ ಪ್ರದೇಶಗಳಲ್ಲಿ ಒಟ್ಟಾರೆ ನಿರುದ್ಯೋಗ ದರವು ಶೇ.4.4ರಿಂದ ಶೇ.7.7ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದ ಪುರುಷರಲ್ಲಿ ನಿರುದ್ಯೋಗದ ಪ್ರಮಾಣವು ಶೇ.3ರಿಂದ ಶೇ.6.9ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶದ ಮಹಿಳೆಯರ ನಿರುದ್ಯೋಗ ದರವು ಶೇ.10.9ರಿಂದ ಶೇ.10.8ಕ್ಕೆ ಕುಸಿದಿದೆ.

 2016-17ರ ಸಾಲಿನಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಕಾರ್ಮಿಕರ ಪ್ರಮಾಣವು ಶೇ.75.8ರಷ್ಟು ಪುರುಷರು ಹಾಗೂ ಶೇ.23.3ರಷ್ಟು ಮಹಿಳೆಯರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News