ಡಾನ್ ಬ್ರಾಡ್ಮನ್, ಅಝರ್ ಅಲಿ ದಾಖಲೆ ಮುರಿದ ವಾರ್ನರ್

Update: 2019-11-30 18:24 GMT

ಔಟಾಗದೆ ಅಡಿಲೇಡ್, ನ.30: ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 335 ರನ್ ಗಳಿಸುವುದರೊಂದಿಗೆ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಹಾಗೂ ಪಾಕ್‌ನ ಅಝರ್ ಅಲಿ ದಾಖಲೆಯೊಂದನ್ನು ಮುರಿದರು.

ಪಾಕಿಸ್ತಾನ ವಿರುದ್ಧ ಔಟಾಗದೆ 335 ರನ್ ಗಳಿಸಿದ ವಾರ್ನರ್ ಅಡಿಲೇಡ್ ಓವಲ್‌ನಲ್ಲಿ ಮೊದಲ ಬಾರಿ ತ್ರಿಶತಕ ಸಿಡಿಸಿದ ಸಾಧನೆ ಮಾಡಿದರು. ವಾರ್ನರ್ ಒಂದು ಕೈಯ್ಯಲ್ಲಿ ಬ್ಯಾಟ್,ಮತ್ತೊಂದು ಕೈಯ್ಯಲ್ಲಿ ಹೆಲ್ಮೆಟ್ ಹಿಡಿದುಕೊಂಡು ಪೆವಿಲಿಯನ್‌ನತ್ತ ಹೆಜ್ಜೆ ಇಡುತ್ತಿದ್ದಾಗ ವೀಕ್ಷವಿವರಣೆಗಾರ ಮಾರ್ಕ್ ಟೇಲರ್ ಹಾಗೂ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಎದ್ದುನಿಂತು ಗೌರವ ನೀಡಿದರು.

ಚೆಂಡು ವಿರೂಪ ಪ್ರಕರಣದಲ್ಲಿ ಕಳೆದ ವರ್ಷ 12 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ವಾರ್ನರ್ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲೂ ಕಳಪೆ ಪ್ರದರ್ಶನ ನೀಡಿದ್ದರು. ಇದೀಗ ಪಾಕ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮೊದಲಿನ ಲಯಕ್ಕೆ ಮರಳಲಿರುವ ವಾರ್ನರ್ ಆಸೀಸ್ ದಂತಕತೆ ಡಾನ್ ಬ್ರಾಡ್ಮನ್(299)ಅಡಿಲೇಡ್ ಓವಲ್‌ನಲ್ಲಿಯೇ 1931-32ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ್ದ ಗರಿಷ್ಠ ಮೊತ್ತದ ದಾಖಲೆಯನ್ನು ಮುರಿದರು. ಔಟಾಗದೆ 335 ರನ್ ಗಳಿಸಿದ ವಾರ್ನರ್ ಅವರು ಬ್ರಾಡ್ಮನ್ ಹಾಗೂ ಮಾರ್ಕ್ ಟೇಲರ್ ಅವರ ಗರಿಷ್ಠ ವೈಯಕ್ತಿಕ ಟೆಸ್ಟ್ ಸ್ಕೋರ್ ದಾಖಲೆಯನ್ನ್ನೂ(334 ರನ್)ಮುರಿದು ಗಮನ ಸೆಳೆದರು. 418 ಎಸೆತಗಳ ಇನಿಂಗ್ಸ್‌ನಲ್ಲಿ 39 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 335 ರನ್ ಸಿಡಿಸಿದ 33ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್ 303 ರನ್ ಗಳಿಸಿದ ಬೆನ್ನಿಗೇ ಡೇ-ನೈಟ್ ಟೆಸ್ ್ಟ ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ್ದ ಪಾಕಿಸ್ತಾನದ ನಾಯಕ ಅಝರ್ ಅಲಿ ದಾಖಲೆಯನ್ನು ಮುರಿದರು. 2016ರಲ್ಲಿ ದುಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಲಿ ಔಟಾಗದೆ 302 ರನ್ ಗಳಿಸಿದ್ದರು. ವಾರ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ 8ನೇ ಗರಿಷ್ಠ ಸ್ಕೋರ್ ಗಳಿಸಿದರು. ಮ್ಯಾಥ್ಯೂ ಹೇಡನ್ ಬಳಿಕ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಸ್ಟ್ರೇಲಿಯದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. 2003ರಲ್ಲಿ ಝಿಂಬಾಬ್ವೆ ವಿರುದ್ಧ ಹೇಡನ್ 380 ರನ್ ಗಳಿಸಿದ್ದರು. ವಾರ್ನರ್ ತ್ರಿಶತಕ ಸಿಡಿಸಿದ ಆಸೀಸ್‌ನ 7ನೇ ಬ್ಯಾಟ್ಸ್‌ಮನ್. ಟೆಸ್ಟ್ ಇನಿಂಗ್ಸ್‌ನಲ್ಲಿ 10ನೇ ಗರಿಷ್ಠ ಮೊತ್ತದ ವೈಯಕ್ತಿಕ ಸ್ಕೋರ್(335)ಗಳಿಸಿದರು. ಪಾಕಿಸ್ತಾನ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 154 ರನ್ ಗಳಿಸಿದ್ದ ವಾರ್ನರ್ ಆಸೀಸ್‌ಗೆ ಇನಿಂಗ್ಸ್ ಹಾಗೂ 5 ರನ್‌ಗಳ ಅಂತರದ ಗೆಲುವು ತಂದಿದ್ದರು. ಒಂದು ವರ್ಷ ನಿಷೇಧದ ಬಳಿಕ ಆ್ಯಶಸ್ ಸರಣಿಯಲ್ಲಿ ಆಡಿದ್ದ ವಾರ್ನರ್ 10 ಇನಿಂಗ್ಸ್ ಗಳಲ್ಲಿ ಒಟ್ಟು 95 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News