ಅತ್ಯಂತ ವೇಗವಾಗಿ 7,000 ಟೆಸ್ಟ್ ರನ್ ಪೂರೆಸಿದ ಸ್ಟೀವನ್ ಸ್ಮಿತ್

Update: 2019-11-30 18:27 GMT

ಅಡಿಲೇಡ್, ನ.30: ಆಸ್ಟ್ರೇಲಿಯದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಅತ್ಯಂತ ವೇಗವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 7,000 ರನ್ ಪೂರೈಸಿದರು. ಈ ಮೂಲಕ 1946ರಲ್ಲಿ ನಿರ್ಮಿಸಲ್ಪಟ್ಟಿದ್ದ ಹಳೆಯ ದಾಖಲೆಯೊಂದನ್ನು ಮುರಿದರು. ಪಾಕಿಸ್ತಾನ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮುಹಮ್ಮದ್ ಮುಸಾ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದ 30ರ ಹರೆಯದ ಸ್ಮಿತ್ 73 ವರ್ಷಗಳ ಹಿಂದೆ ಇಂಗ್ಲೆಂಡ್‌ನ ವಾಲ್ಟರ್ ಹ್ಯಾಮಂಡ್ ನಿರ್ಮಿಸಿದ್ದ ದಾಖಲೆಯನ್ನು ಮುರಿದು ಹೊಸ ಮೈಲುಗಲ್ಲು ತಲುಪಿದರು.

ಹ್ಯಾಮಂಡ್ 80 ಟೆಸ್ಟ್‌ನ 131 ಇನಿಂಗ್ಸ್‌ಗಳಲ್ಲಿ 7,000 ರನ್ ಪೂರೈಸಿದ್ದರು. 9 ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಸ್ಮಿತ್ ತನ್ನ 70ನೇ ಟೆಸ್ಟ್ ನ 126ನೇ ಇನಿಂಗ್ಸ್‌ನಲ್ಲಿ 7 ಸಾವಿರ ರನ್ ಮೈಲುಗಲ್ಲು ತಲುಪಿದರು. ಭಾರತದ ವೀರೇಂದ್ರ ಸೆಹ್ವಾಗ್(131 ಇನಿಂಗ್ಸ್)ಮೂರನೇ ಅತ್ಯಂತ ವೇಗದಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 7 ಸಾವಿರಕ್ಕೂ ಅಧಿಕ ರನ್ ಗಳಿಸಿದ 50ನೇ ಬ್ಯಾಟ್ಸ್‌ಮನ್ ಸ್ಮಿತ್.

ಇದೇ ವೇಳೆ ಸ್ಮಿತ್ ಲೆಜೆಂಡರಿ ಬ್ಯಾಟ್ಸ್‌ಮನ್ ಬ್ರಾಡ್ಮನ್ ರನ್ ದಾಖಲೆ(6,996 ರನ್)ಯನ್ನು ಮುರಿದರು. ಸ್ಮಿತ್ 70ನೇ ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದರೆ, ಬ್ರಾಡ್ಮನ್ ಕೇವಲ 52 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದರು. ಈ ವರ್ಷದ ಇಂಗ್ಲೆಂಡ್ ವಿರುದ್ಧ ನಡೆದ ಆ್ಯಶಸ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸ್ಮಿತ್‌ರನ್ನು ಬ್ರಾಡ್ಮನ್ ಬಳಿಕ ಆಸೀಸ್ ಕಂಡ ಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಬಣ್ಣಿಸಲಾಗುತ್ತಿದೆ. ಕೇವಲ 7 ಇನಿಂಗ್ಸ್ ಗಳಲ್ಲಿ 774 ರನ್ ಗಳಿಸಿದ್ದ ಸ್ಮಿತ್ ಈ ಬಣ್ಣನೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್‌ಗೆ ಬ್ರಾಡ್ಮನ್ ಹಾಗೂ ಹ್ಯಾಮಂಡ್ ದಾಖಲೆಯನ್ನು ಮುರಿಯುವ ಅವಕಾಶ ಲಭಿಸಿತ್ತು. ಆದರೆ ಅವರಿಗೆ ಕೇವಲ 4 ರನ್ ಕೊರತೆ ಉಂಟಾಯಿತು. ಗ್ರೆಗ್ ಚಾಪೆಲ್(7,110) ಸ್ಮಿತ್‌ರ ಮುಂದಿನ ಗುರಿಯಾಗಿದ್ದಾರೆ. ರಿಕಿ ಪಾಂಟಿಂಗ್ ದಾಖಲೆ(168 ಟೆಸ್ಟ್, 13,378 ರನ್)ಮುರಿಯಬೇಕಾದರೆ ರನ್‌ಗಳ ಪರ್ವತವನ್ನು ಏರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News