ನ್ಯೂಝಿಲ್ಯಾಂಡ್ - ಇಂಗ್ಲೆಂಡ್‌ ದ್ವಿತೀಯ ಟೆಸ್ಟ್ ಪಂದ್ಯ ಡ್ರಾ

Update: 2019-12-03 17:59 GMT

ಹ್ಯಾಮಿಲ್ಡನ್, ಡಿ.3: ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್ ವಿರುದ್ಧದ ಮಳೆ ಬಾಧಿತ ದ್ವಿತೀಯ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈ ಮೂಲಕ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ.

ಐದನೇ ದಿನವಾದ ಮಂಗಳವಾರ ಭೋಜನವಿರಾಮದ ವೇಳೆ ಮಳೆ ಸುರಿಯಲಾರಂಭಿಸಿತು. ಆಗ ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್‌ನ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದು ತನ್ನ 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಟೇಲರ್ 105(186 ಎಸೆತ, 11 ಬೌಂಡರಿ,2 ಸಿಕ್ಸರ್) ಹಾಗೂ ವಿಲಿಯಮ್ಸನ್ 104 ರನ್( 234 ಎಸೆತ, 11 ಬೌಂಡರಿ)ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 213ರನ್ ಸೇರಿಸಿದ್ದಾರೆ. ಮಳೆಯಿಂದಾಗಿ ಇಂಗ್ಲೆಂಡ್‌ಗೆ ಮತ್ತೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಜಯಿಸಿದ್ದ ನ್ಯೂಝಿಲ್ಯಾಂಡ್ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು. ಕಿವೀಸ್ ಕಳೆದ 10 ಸರಣಿಯಲ್ಲಿ 8ರಲ್ಲಿ ಗೆಲುವು, ತಲಾ ಒಂದರಲ್ಲಿ ಡ್ರಾ ಹಾಗೂ ಸೋಲು ಅನುಭವಿಸಿದೆ. ಲಂಚ್ ವಿರಾಮದ ಬಳಿಕ ಜೋ ರೂಟ್ ಎಸೆತದಲ್ಲಿ ಬೌಂಡರಿ ಗಳಿಸಿದ ವಿಲಿಯಮ್ಸನ್ 21ನೇ ಟೆಸ್ಟ್ ಶತಕ ಪೂರೈಸಿದರು. ರೂಟ್ ಅವರ ಮುಂದಿನ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸುವುದರೊಂದಿಗೆ ಟೇಲರ್ 19ನೇ ಶತಕ ಸಿಡಿಸಿದರು.

ಹಲವು ಕ್ಯಾಚ್ ಕೈಚೆಲ್ಲಿದ ಕಾರಣ ಗೆಲ್ಲುವ ಅಲ್ಪ ಅವಕಾಶವನ್ನು ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಮಳೆರಾಯ ಕೂಡ ಬ್ಯಾಟಿಂಗ್‌ಗೆ ಅವಕಾಶ ನಿರಾಕರಿಸಿತು. ನ್ಯೂಝಿಲ್ಯಾಂಡ್ 2 ವಿಕೆಟ್ ನಷ್ಟಕ್ಕೆ 96 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು. ಇಂಗ್ಲೆಂಡ್ ಆರಂಭಿಕ ವಿಕೆಟ್‌ಗಳನ್ನು ಬೇಗನೆ ಉರುಳಿಸುವ ಲೆಕ್ಕಾಚಾರದಲ್ಲಿತ್ತು. ಆದರೆ ವಿಲಿಯಮ್ಸನ್ ನೀಡಿದ ಕ್ಯಾಚ್‌ಗಳನ್ನು ಒಲ್ಲಿ ಪೋಪ್ ಹಾಗೂ ಜೊ ಡೆನ್ಲೀ ಕೈಚೆಲ್ಲಿದರು.

ಕಿವೀಸ್ ನಾಯಕ ವಿಲಿಯಮ್ಸನ್ 39 ರನ್ ಗಳಿಸಿದ್ದಾಗ ವಿಕೆಟ್‌ಕೀಪರ್ ಪೋಪ್ ಕ್ಯಾಚ್ ಕೈಬಿಟ್ಟರು. ವಿಲಿಯಮ್ಸನ್ 62 ರನ್ ಗಳಿಸಿದ್ದಾಗ ಡೆನ್ಲಿ ಮತ್ತೊಮ್ಮೆ ಕ್ಯಾಚ್ ಕೈಚೆಲ್ಲಿದರು.

ವಿಲಿಯಮ್ಸನ್ 97 ರನ್ ಗಳಿಸಿದ್ದಾಗ ಸ್ಯಾಮ್ ಕರನ್ ಕ್ಯಾಚ್ ಬಿಟ್ಟರು. ಇಂಗ್ಲೆಂಡ್ ನಾಯಕ ಜೋ ರೂಟ್ ದ್ವಿಶತಕ ಸಿಡಿಸಿ ಮೊದಲಿನ ಫಾರ್ಮ್‌ಗೆ ಮರಳಿದ್ದು ಪಂದ್ಯದಲ್ಲಿ ಧನಾತ್ಮಕ ಅಂಶವಾಗಿದೆ. ಈ ಸಾಹಸಕ್ಕೆ ರೂಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಟೇಲರ್ 7,000 ಟೆಸ್ಟ್ ರನ್ ಗಳಿಸಿದ ನ್ಯೂಝಿಲ್ಯಾಂಡ್ ‌ನ 2ನೇ ಬ್ಯಾಟ್ಸ್‌ಮನ್

ಹ್ಯಾಮಿಲ್ಟನ್, ಡಿ.3: ರಾಸ್ ಟೇಲರ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 7,000 ರನ್ ಪೂರೈಸಿದ ನ್ಯೂಝಿಲ್ಯಾಂಡ್‌ನ ಎರಡನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು. ಅತ್ಯಂತ ವೇಗವಾಗಿ 7 ಸಾವಿರ ರನ್ ಪೂರೈಸಿದ ಟೇಲರ್ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ನ 5ನೇ ದಿನದಾಟದಲ್ಲಿ ಈ ಸಾಧನೆ ಮಾಡಿದರು. ಟೇಲರ್ ಕೇವಲ 169ನೇ ಇನಿಂಗ್ಸ್‌ನಲ್ಲಿ 7,000 ರನ್ ಪೂರೈಸಿದರು. ಈ ಮೂಲಕ ನ್ಯೂಝಿಲ್ಯಾಂಡ್‌ನ ಸ್ಟೀಫನ್ ಫ್ಲೆಮಿಂಗ್ ದಾಖಲೆಯನ್ನು ಮುರಿದರು. ಫ್ಲೆಮಿಂಗ್ 189ನೇ ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದ್ದರು. ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ(53)ಗಳಿಸಿದ್ದ ಟೇಲರ್ 2ನೇ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದರು. ಟೇಲರ್ ಟೆಸ್ಟ್‌ನಲ್ಲಿ 7,000 ರನ್ ಗಳಿಸಿದ ವಿಶ್ವದ 51ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಅತ್ಯಂತ ವೇಗವಾಗಿ 7,000 ರನ್ ಪೂರೈಸಿದ ಸಾಧನೆ ಮಾಡಿದ್ದರು. ಭಾರತದ ವೀರೇಂದ್ರ ಸೆಹ್ವಾಗ್(134ನೇ ಇನಿಂಗ್ಸ್)ಹಾಗೂ ಸಚಿನ್ ತೆಂಡುಲ್ಕರ್(136)ವೇಗವಾಗಿ 7 ಸಾವಿರ ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ 2ನೇ, ಮೂರನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News