ರಣಜಿ ಟ್ರೋಫಿ: ಮುಂಬೆ ತಂಡಕ್ಕೆ ಆರಂಭಿಕ ಆಟಗಾರರಾಗಿ ಪೃಥ್ವಿ ಶಾ, ರಹಾನೆ ಅಯ್ಕೆ

Update: 2019-12-03 18:04 GMT

ಮುಂಬೈ, ಡಿ.3: ಬರೋಡಾ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಮುಂಬೈ ತಂಡದ ಆರಂಭಿಕ ಆಟಗಾರರಾಗಿ ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯ ರಹಾನೆ ಮತ್ತು ಯುವ ಓಪನರ್ ಪೃಥ್ವಿ ಶಾ ಅವರನ್ನು ಮಂಗಳವಾರ ಆಯ್ಕೆ ಮಾಡಲಾಗಿದೆ.

15 ಸದಸ್ಯರ ಮುಂಬೈ ತಂಡವನ್ನು ಮಿಲಿಂದ್ ರೀಜ್ ನೇತೃತ್ವದ ತಾತ್ಕಾಲಿಕ ಆಯ್ಕೆ ಸಮಿತಿಯು ಸೋಮವಾರವೇ ಆಯ್ಕೆ ಮಾಡಿದೆ. ಇಂದು ಅಧಿಕೃತವಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ.

41 ಬಾರಿ ರಣಜಿ ಮುಂಬೈ ಚಾಂಪಿಯನ್ ಆಗಿದೆ. ಹಾಲಿ ಚಾಂಪಿಯನ್ ಮುಂಬೈ 2019-20ರ ರಣಜಿ ಟ್ರೋಫಿ ಆವೃತ್ತಿಯ ಮೊದಲ ಪಂದ್ಯವನ್ನು ಡಿಸೆಂಬರ್ 9ರಿಂದ ವಡೋದರಾದಲ್ಲಿ ಬರೋಡಾ ವಿರುದ್ಧ ಆಡುತ್ತದೆ. ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ನಾಯಕರಾಗಿದ್ದಾರೆ.ಅನುಭವಿ ವಿಕೆಟ್ ಕೀಪರ್ ಆದಿತ್ಯ ತಾರೆ ಅವರ ಉಪನಾಯಕನಾಗಿರುತ್ತಾರೆ. ಶ್ರೇಯಸ್ ಅಯ್ಯರ್ ಮತ್ತು ಆಲ್‌ರೌಂಡರ್ ಶಿವಂ ದುಬೆ ಅವರು ರಾಷ್ಟ್ರೀಯ ತಂಡದಲ್ಲಿರುವುದರಿಂದ ಮುಂಬೈ ತಂಡದ ಸೇವೆಗೆ ಲಭ್ಯರಿಲ್ಲ. ಭಾರತದ ಟೆಸ್ಟ್ ಸ್ಪೆಷಲಿಸ್ಟ್ ರಹಾನೆ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತದಲ್ಲಿ ಎಂಟು ತಿಂಗಳ ಡೋಪಿಂಗ್ ನಿಷೇಧವನ್ನು ಅನುಭವಿಸಿದ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಶಾ ಅವರಿಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಲು ಈ ಟೂರ್ನಿಯು ಉತ್ತಮ ಅವಕಾಶವಾಗಿದೆ.

ಮುಂಬೈ ತಂಡವು ಹೆಚ್ಚು ಕಡಿಮೆ ಸಮತೋಲಿತವಾಗಿ ಕಾಣುತ್ತದೆ. ಜೈ ಬಿಸ್ಟಾ, ಶುಭಮ್ ರಂಜನೆ, ಶಮ್ಸ್ ಮುಲಾನಿ ಮತ್ತು ವೇಗಿಗಳಾದ ಶಾರ್ದೂಲ್ ಠಾಕೂರ್ ಮತ್ತು ಧವಲ್ ಕುಲಕರ್ಣಿ ತಂಡದಲ್ಲಿದ್ದಾರೆ. ಮೂಲಗಳ ಪ್ರಕಾರ ಸಿದ್ಧೇಶ್ ಲಾಡ್ ಅವರು ಈ ಶುಕ್ರವಾರ ವಿವಾಹವಾಗಲಿರುವುದರಿಂದ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News