ದಕ್ಷಿಣ ಏಶ್ಯನ್ ಗೇಮ್ಸ್ : ಭಾರತದ ಪದಕದ ಸಂಖ್ಯೆ 48ಕ್ಕೆ ಏರಿಕೆ

Update: 2019-12-04 17:52 GMT

ಕಠ್ಮಂಡು, ಡಿ.4: ಇಲ್ಲಿ ನಡೆಯುತ್ತಿರುವ ದಕ್ಷಿಣ ಏಶ್ಯ ಗೇಮ್ಸ್‌ನಲ್ಲಿ ನಾಲ್ಕನೇ ದಿನವಾದ ಬುಧವಾರ ಭಾರತ ತನ್ನ ಪದಕಗಳ ಸಂಖ್ಯೆಯನ್ನು 48ಕ್ಕೆ ಏರಿಸಿಕೊಂಡಿದೆ.

ಬುಧವಾರ ಬೆಳಗ್ಗೆ ನಡೆದ ಪುರುಷರ ಹಾಗೂ ಮಹಿಳಾ ಡಿಸ್ಕಸ್ ಎಸೆತದ ಸ್ಪರ್ಧೆಯಲ್ಲಿ ಭಾರತ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಜಯಿಸಿತು. ಪುರುಷರ ವಿಭಾಗದಲ್ಲಿ ಕೃಪಾಲ್ ಸಿಂಗ್ 57.99 ಮೀ.ದೂರಕ್ಕೆ ಡಿಸ್ಕಸ್ ಎಸೆದು ಹೊಸ ದಾಖಲೆ ನಿರ್ಮಿಸಿದರು. ಇದೇ ಸ್ಪರ್ಧೆಯಲ್ಲಿ ಗಗನ್‌ದೀಪ್ ಸಿಂಗ್ ಬೆಳ್ಳಿ ಪದಕ ಜಯಿಸಿದರು.

‘‘ನನಗೆ ತುಂಬಾ ಖುಷಿಯಾಗುತ್ತಿದೆ. ಆದರೆ, ನನ್ನ ಪ್ರದರ್ಶನ ಉತ್ತಮವಾಗಿರಲಿಲ್ಲ. ಕೆಲವು ಸಮಸ್ಯೆಯನ್ನು ಎದುರಿಸಿದ ಹೊರತಾಗಿಯೂ ಮೊದಲ ಸ್ಥಾನ ಪಡೆದಿರುವುದಕ್ಕೆ ತೃಪ್ತಿಯಿದೆ. 2020ರ ಒಲಿಂಪಿಕ್ಸ್‌ಗೆ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನನಗಿದೆ. ನಾನು ಕಠಿಣ ಶ್ರಮ ಹಾಕಲಿದ್ದೇವೆ’’ ಎಂದು ಕೃಪಾಲ್ ಸಿಂಗ್ ತಿಳಿಸಿದ್ದಾರೆ. ಮಹಿಳಾ ಡಿಸ್ಕಸ್ ಎಸೆತದ ಸ್ಪರ್ಧೆಯಲ್ಲಿ ನವಜೀತ್ ಕೌರ್ ಚಿನ್ನ ಹಾಗೂ ಸುರಾವಿ ಬಿಸ್ವಾಸ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

‘‘ನಾನು ನಿರೀಕ್ಷಿಸಿದಷ್ಟು ಪ್ರದರ್ಶನ ನೀಡಿಲ್ಲ. ಇಲ್ಲಿ ನಾವು ಸ್ಪರ್ಧೆಯ ವೇಳೆ ಸಾಕಷ್ಟು ಸಮಸ್ಯೆ ಎದುರಿಸಿದೆವು. ಎಲ್ಲ ಸಮಸ್ಯೆಯ ನಡುವೆಯೂ ಪದಕ ಜಯಿಸಿರುವುದು ನಮ್ಮ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ’’ ಎಂದು ಕೌರ್ ಪ್ರತಿಕ್ರಿಯಿಸಿದರು.

ಟೂರ್ನಿಯ ನಾಲ್ಕನೇ ದಿನದ ಮಧ್ಯಾಹ್ನದ ವೇಳೆ ಭಾರತ ಐದು ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಜಯಿಸಿದ್ದಾರೆ.

ಪುರುಷರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಲೋಕೇಶ್ ಸತ್ಯನ್ ಚಿನ್ನ ಹಾಗೂ ಸ್ವಾಮಿನಾಥನ್ ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಸಾಂದ್ರಾ ಬಾಬು ಕಂಚಿನ ಪದಕ ಜಯಿಸಿದ್ದಾರೆ.

ಮಹಿಳೆಯರ 200 ಮೀಟರ್ ಓಟದಲ್ಲಿ ಅರ್ಚನಾ ಚಿನ್ನ ಹಾಗೂ ಚಂದ್ರಲೇಖಾ ಕಂಚಿನ ಪದಕ ಜಯಿಸಿದ್ದಾರೆ. ಪುರುಷರ 10,000 ಮೀಟರ್‌ನಲ್ಲಿ ಸುರೇಶ್ ಕುಮಾರ್ ಚಿನ್ನದ ಪದಕ ಗೆದ್ದುಕೊಂಡರು. ಮಹಿಳೆಯರ ವಿಭಾಗದಲ್ಲಿ ಸಾಜನ್ ಲಾಮಾ ಹಾಗೂ ಗ್ಯಾಂದಶ್ ಸಿಂಗ್ ಕಂಚಿನ ಪದಕ ಜಯಿಸಿದ್ದಾರೆ.

ಭಾರತದ ಶಟ್ಲರ್‌ಗಳಿಂದ 8 ಪದಕಗಳ ಭರವಸೆ

ಕಠ್ಮಂಡು, ಡಿ.4: ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಶ್ಯ ಕ್ರೀಡಾಕೂಟದಲ್ಲಿ ಭಾರತದ ಶಟ್ಲರ್‌ಗಳು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. 8 ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

 ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಸಿರಿಲ್ ವರ್ಮಾ 21-12, 21-17ರಲ್ಲಿ ಪಾಕಿಸ್ತಾನದ ಮುರಾದ್ ಅಲಿಯನ್ನು ಸೋಲಿಸಿ ಮಂಗಳವಾರ ಭಾರತದ ಅಭಿಯಾನ ಆರಂಭಿಸಿದರು.

ವನಿತೆಯರ ಸಿಂಗಲ್ಸ್‌ನಲ್ಲಿ 16 ವರ್ಷದ ಗಾಯತ್ರಿ ಗೋಪಿಚಂದ್ ಎರಡನೇ ಶ್ರೇಯಾಂಕಿತ ಪಾಕಿಸ್ತಾನದ ಮಹೂರ್ ಶಹಝಾದ್ ಅವರನ್ನು 21-15, 21-16 ಅಂತರದಿಂದ ಸೋಲಿಸುವ ಮೂಲಕ ಭಾರತದ ಗೆಲುವು ಮುಂದುವರಿಸಿದರು.

ಸೆಮಿಫೈನಲ್‌ನಲ್ಲಿ ಗಾಯತ್ರಿ ಅವರೊಂದಿಗೆ ಸೇರಿಕೊಂಡ ಅಗ್ರ ಶ್ರೇಯಾಂಕಿತ ಅಶ್ಮಿತಾ ಚಲಿಹಾ ಅವರು ಪಾಕಿಸ್ತಾನದ ಎದುರಾಳಿ ಪಾಲ್ವಾಶಾ ಬಶೀರ್‌ಗೆ 21-9, 21-7 ಸೆಟ್‌ಗಳಿಂದ ಸೋಲುಣಿಸಿದರು.

 ಶ್ರೀಲಂಕಾದ ರಣುಷ್ಕಾ ಕರುಣಾತಿಲಕ ವಿರುದ್ಧ 21-17, 21-17 ಅಂತರದ ಗೆಲುವು ದಾಖಲಿಸಿದ ಆರ್ಯಮಾನ್ ಟಂಡನ್ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದರು.

ಭಾರತದ ಮಹಿಳಾ ಡಬಲ್ಸ್ ಜೋಡಿಗಳಾದ ಕುಹೂ ಗರ್ಗ್-ಅನುಷ್ಕಾ ಪಾರಿಖ್ ಮತ್ತು ಮೇಘನಾ ಜಕ್ಕಂಪುಡಿ-ಎಸ್ ನೆಲಕುರ್ತಿ ಕೂಡ ತಮ್ಮ ಬಾಂಗ್ಲಾದೇಶದ ಎದುರಾಳಿಗಳನ್ನು ಮಣಿಸಿ ಸೆಮಿಫೈನಲ್‌ಗೆ ಮುನ್ನಡೆದರು.

 ಗರ್ಗ್ ಮತ್ತು ಪಾರಿಖ್ 21-18, 21-11ರಲ್ಲಿ ಬ್ರಿಸ್ಟಿ ಖಾತುನ್ ಮತ್ತು ರೆಹಾನಾ ಖಾತುನ್ ಅವರನ್ನು ಸೋಲಿಸಿದರು. ಜಕ್ಕಂಪುಡಿ ಮತ್ತು ನೆಲಕುರ್ತಿ ಅವರು 21-14, 21-11ರಿಂದ ಶಾಲ್ಪಾ ಅಕ್ಟರ್ ಮತ್ತು ಅಲೀನಾ ಸುಲ್ತಾನಾ ವಿರುದ್ಧ ಜಯಗಳಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಾದ ಧ್ರುವ್ ಕಪಿಲಾ ಮತ್ತು ಜಕ್ಕಂಪುಡಿ ಅವರು ಶ್ರೀಲಂಕಾದ ರಣುಷ್ಕಾ ಕರುಣಾತಿಲಕ ಮತ್ತು ಕವಿಂಡಿ ಸಿರಿಮಣ್ಣಾ ವಿರುದ್ಧ 21-14, 26-24ರಲ್ಲಿ ಪ್ರಯಾಸದ ಜಯ ಗಳಿಸಿದರು. ಪುರುಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಜೋಡಿ ಅರುಣ್ ಜಾರ್ಜ್ ಮತ್ತು ಸನ್ಯಾಮ್ ಶುಕ್ಲಾ ಶ್ರೀಲಂಕಾದ ಎಸ್ ಡಯಾಸ್ ಅಂಗೋಡಾ ವಿದ್ಯಾನಾಲಗೆ ಮತ್ತು ಬಿ ಥಾರಿಂದು ಡುಲ್ಲೆವ್ ವಿರುದ್ಧ 10-21, 21-23 ಅಂತರದಲ್ಲಿ ಸೋಲು ಅನುಭವಿಸಿದರು ಆದಾಗ್ಯೂ ಕೃಷ್ಣ ಗರಗಾ ಮತ್ತು ಕಪಿಲಾ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಪದಕ ಭರವಸೆಯನ್ನು ಜೀವಂತವಾಗಿರಿಸಿಕೊಂಡರು. ಅವರು ನೇಪಾಲದ ಎರಡನೇ ಶ್ರೇಯಾಂಕದ ದಿಪೇಶ್ ಧಾಮಿ ಮತ್ತು ರತಂಜಿತ್ ತಮಾಂಗ್ ವಿರುದ್ಧ 21-16, 21-13 ಗೇಮ್‌ಗಳಿಂದ ಜಯ ಗಳಿಸಿದರು.

ಖೋ ಖೋದಲ್ಲಿ ಭಾರತಕ್ಕೆ ಎರಡು ಚಿನ್ನ

 ಪೋಖರಾ, ಡಿ. 4: ಕಠ್ಮಂಡುವಿನಲ್ಲಿ ಬುಧವಾರ ನಡೆದ 13ನೇ ದಕ್ಷಿಣ ಏಶ್ಯನ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಖೋ-ಖೋ ತಂಡ ಚಿನ್ನ ಜಯಿಸಿವೆ. ದಿಲ್ಲಿಯ ನಸ್ರೀನ್ ನೇತೃತ್ವದ ಮಹಿಳಾ ತಂಡವು ಆತಿಥೇಯ ನೇಪಾಳ ವಿರುದ್ಧ ಜಯ ಗಳಿಸಿ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು. 2016ರ ಚಿನ್ನದ ಪದಕ ವಿಜೇತ ಭಾರತದ ಪುರುಷರ ತಂಡ ಸತತ ಎರಡನೇ ಬಾರಿಗೆ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡದ ಚಾಂಪಿಯನ್ ಕನಸನ್ನು ಭಗ್ನಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News