ಕ್ಷಮೆ ಯಾಚಿಸುತ್ತೇನೆ, ಆದರೆ ಅಹಂಕಾರ ಸುಪ್ರೀಂ ಕೋರ್ಟನ್ನು ನಾಶಗೊಳಿಸಬಹುದು: ನ್ಯಾಯಮೂರ್ತಿ ಮಿಶ್ರಾ

Update: 2019-12-05 11:02 GMT

ಹೊಸದಿಲ್ಲಿ: ನ್ಯಾಯಮೂರ್ತಿ ಅರುಣ್ ಮಿಶ್ರಾ ಜತೆ ಎರಡು ದಿನಗಳ ಹಿಂದೆ ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯನ್ ತೀವ್ರ ವಾಗ್ವಾದ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು, ತಮ್ಮ ಮಾತುಗಳಿಂದ ನೋವಾಗದ್ದರೆ ಕ್ಷಮೆ ಯಾಚಿಸಲು ಸಿದ್ಧ. ಆದರೆ ಅಹಂಕಾರ ಈ ಸಂಸ್ಥೆಯನ್ನು ನಾಶಪಡಿಸುತ್ತಿದ್ದು, ಇದನ್ನು ಸಂರಕ್ಷಿಸಬೇಕಾದ ಹೊಣೆ ವಕೀಲರ ಸಂಘದ ಮೇಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗುರುವಾರ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಎಂ.ಆರ್.ಶಾ ಅವರು ಕಲಾಪಕ್ಕೆ ಹಾಜರಾಗುತ್ತಿದ್ದಂತೆ ಹಿರಿಯ ವಕೀಲರಾದ ಕಪಿಲ್ ಸಿಬಲ್, ಮುಕುಲ್ ರೋಹಟ್ಗಿ, ಅಭಿಷೇಕ್ ಸಿಂಘ್ವಿ ಮತ್ತು ವಕೀಲರ ಪರಿಷತ್ ಅಧ್ಯಕ್ಷ ರಾಕೇಶ್ ಖನ್ನಾ ಅವರು ಭೇಟಿ ಮಾಡಿದರು.

"ನನ್ನ ವೃತ್ತಿಯುದ್ದಕ್ಕೂ ನನ್ನನ್ನು ಟೀಕಿಸಲಾಗುತ್ತಿದೆ. ಇತರ ನ್ಯಾಯಮೂರ್ತಿಗಳಿಗಿಂತಲೂ ಹೆಚ್ಚಾಗಿ ನಾನು ವಕೀಲರ ಪರಿಷತ್‍ ಗೆ ಗೌರವ ನೀಡುತ್ತೇನೆ. ನಮ್ಮ ನ್ಯಾಯಪೀಠ ಸ್ಪಷ್ಟನೆಗಳನ್ನು ಕೇಳಿದಾಗ ವಕೀಲರು ಅಹಂಕಾರ ತೋರಿಸಬಾರದು. ನನ್ನ ವೃತ್ತಿಯಲ್ಲಿ ಎಂದೂ ನಾನು ವಕೀಲರ ಅವಹೇಳನ ಮಾಡಿಲ್ಲ" ಎಂದು ನ್ಯಾಯಮೂರ್ತಿ ಸ್ಪಷ್ಟಪಡಸಿದರು.

"ನನ್ನ ಮಾತಿನಿಂದ ಯಾರಿಗಾದರೂ, ಯಾವಾಗಲಾದರೂ ನೋವಾಗಿದ್ದರೆ ಕೈಮುಗಿದು ಕ್ಷಮೆ ಕೇಳುತ್ತೇನೆ" ಎಂದು ಹೇಳಿದರು. ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಮಂಗಳವಾರ 2013ರ ಭೂಸ್ವಾಧೀನ ಕಾಯ್ದೆ ಕುರಿತ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾಗ ನ್ಯಾಯಮೂರ್ತಿ ಮಿಶ್ರಾ ಅವರು, ವಕೀಲ ಶಂಕರನಾರಾಯಣನ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News