ಶಬರಿಮಲೆ ವಿವಾದದಲ್ಲಿ ಸುಪ್ರೀಂ ನೀಡಿದ ತೀರ್ಪು ಅಂತಿಮವಲ್ಲ: ನ್ಯಾಯಮೂರ್ತಿ ಬೊಬ್ಡೆ

Update: 2019-12-05 16:22 GMT

ಹೊಸದಿಲ್ಲಿ, ಡಿ.5: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಈ ಪ್ರಕರಣದಲ್ಲಿ ಅಂತಿಮ ಮಾತಲ್ಲ ಎಂದು ಸಿಜೆಐ ಎಸ್‌ಎ ಬೋಬ್ಡೆ ಗುರುವಾರ ಹೇಳಿದ್ದಾರೆ.

ಶಬರಿಮಲೆ ದೇವಸ್ಥಾನ ಪ್ರವೇಶಿಸಲು ತಮಗೆ ಭದ್ರತೆ ಒದಗಿಸುವಂತೆ ಕೇರಳ ಸರಕಾರಕ್ಕೆ ಸೂಚಿಸುವಂತೆ ಕೋರಿ ಬಿಂದು ಅಮ್ಮಿಣಿ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಭಾರತದ ಮುಖ್ಯ ನ್ಯಾಯಾಧೀಶ ಬೋಬ್ಡೆ, 2018ರ ಸುಪ್ರೀಂಕೋರ್ಟ್ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಆದ್ದರಿಂದ ಈ ಹಿಂದೆ ನೀಡಿದ್ದ ತೀರ್ಪು ಅಂತಿಮ ಮಾತು ಎಂದು ಭಾವಿಸಬಾರದು ಎಂದು ತಿಳಿಸಿದರು.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕು ಎಂಬ ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸುವಂತೆ ಮತ್ತು ದೇವಸ್ಥಾನ ಪ್ರವೇಶಿಸಲು ಬಯಸುವ ಮಹಿಳೆಯರಿಗೆ ಭದ್ರತೆ ಒದಗಿಸುವಂತೆ ಕೇರಳ ಸರಕಾರಕ್ಕೆ ಸೂಚಿಸಬೇಕು. ಕೆಲದಿನಗಳಲ್ಲೇ ದೇವಸ್ಥಾನಕ್ಕೆ ಯಾತ್ರಿಗಳ ಪ್ರವೇಶದ ಅವಧಿ ಮುಗಿಯಲಿರುವ ಕಾರಣ ತಮ್ಮ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಅಮ್ಮಿಣಿಯ ಪರ ವಕೀಲೆ ಇಂದಿರಾ ಜೈಸಿಂಗ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡರು. ಅಲ್ಲದೆ ಸುಪ್ರೀಂಕೋರ್ಟ್‌ನ 2018ರ ತೀರ್ಪಿಗೆ ತಡೆಯಾಜ್ಞೆ ದೊರೆತಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಮುಂದಿನ ವಾರ ಕೇರಳದ ಮತ್ತೊಬ್ಬ ಮಹಿಳೆ ಫಾತಿಮಾ ಸಲ್ಲಿಸಿರುವ ಅರ್ಜಿಯ ಜೊತೆಗೇ ಈ ಅರ್ಜಿಯನ್ನೂ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಸಿಜೆಐ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News