“ಅವರು ಅವಕಾಡೊ ತಿನ್ನುತ್ತಾರೆಯೇ?” : ಈರುಳ್ಳಿ ತಿನ್ನುವುದಿಲ್ಲ ಎಂದ ಸೀತಾರಾಮನ್‌ಗೆ ಚಿದಂಬರಂ ಪ್ರಶ್ನೆ

Update: 2019-12-05 16:40 GMT

ಹೊಸದಿಲ್ಲಿ, ಡಿ. 5: ತನ್ನ ಕುಟುಂಬ ಹೆಚ್ಚು ಈರುಳ್ಳಿ ತಿನ್ನುವುದಿಲ್ಲ ಎಂಬ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ಕೇಳಿದಾಗ 106 ದಿನಗಳನ್ನು ತಿಹಾರ್ ಜೈಲ್‌ನಲ್ಲಿ ಕಳೆದು ಬಿಡುಗಡೆಯಾಗಿ ಗುರುವಾರ ಸಂಸತ್ತಿಗೆ ಆಗಮಿಸಿದ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ‘‘ಅವರು ಅವಕಾಡೋ ತಿನ್ನುತ್ತಾರೆಯೇ ?’’ ಎಂದು ನಾಟಕೀಯವಾಗಿ ಪ್ರಶ್ನಿಸಿದ್ದಾರೆ.

ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿದಂಬರಂ, ಕೇಂದ್ರ ಹಣಕಾಸು ಸಚಿವರ ಕುರಿತ ಟೀಕೆ ನಾಟಕೀಯವಲ್ಲ ಎಂದಿದ್ದಾರೆ.

  ‘‘ನಾನು ನಾಟಕೀಯವಾಗಿ ಹೇಳಿರುವುದಲ್ಲ. ಅವರು ಮೊದಲೇ (ಈರುಳ್ಳಿ ಆಮದಿನ ಬಗ್ಗೆ) ಚಿಂತಿಸಬೇಕಾಗಿತ್ತು. ಈಗ ಆಮದು ಮಾಡಿಕೊಳ್ಳುವುದರಲ್ಲಿ ಯಾವ ಅರ್ಥವಿದೆ ? ಅದು ಯಾವಾಗ ಬರುತ್ತದೆ? ಆದರೆ, ಹಣಕಾಸು ಸಚಿವರು ತಾನು ಹೆಚ್ಚು ಈರುಳ್ಳಿ ತಿನ್ನುವುದಿಲ್ಲ ಎಂದು ಹೇಳಿಕೆ ನೀಡಿದ್ದರೆ, ಅದು ಈ ಸರಕಾರದ ಮನಸ್ಥಿತಿ ಬಿಂಬಿಸುತ್ತದೆ’’ ಎಂದು ಅವರು ಹೇಳಿದ್ದಾರೆ.

ಸಂಸದರೊಬ್ಬರು ಬುಧವಾರ ‘‘ಅವರು ಈರುಳ್ಳಿ ತಿನ್ನುವುದಿಲ್ಲವೇ’’ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ‘‘ನಾನು ಈರುಳ್ಳಿ ಹಾಗೂ ಬೆಳ್ಳುಳ್ಳಿ ತಿನ್ನದ ಕುಟುಂಬಕ್ಕೆ ಸೇರಿದ್ದೇನೆ’’ ಎಂದಿದ್ದರು.

ರಾಷ್ಟ್ರ ಸ್ವಾಮಿತ್ವದ ವ್ಯಾಪಾರ ಸಂಸ್ಥೆ ಎಂಎಂಟಿಸಿ ಟರ್ಕಿಯಿಂದ 4000 ಟನ್ ಈರುಳ್ಳಿ ಆಮದಿಗೆ ಆದೇಶ ನೀಡಿದೆ. ಅದು ಜನವರಿ ಮಧ್ಯಭಾಗದಲ್ಲಿ ಹಡಗಿನ ಮೂಲಕ ಭಾರತಕ್ಕೆ ತಲುಪಲಿದೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿತ್ತು.

 ಈಜಿಪ್ಟ್‌ನಿಂದ 6,090 ಟನ್‌ಗಳು ಹಾಗೂ ಟರ್ಕಿಯಿಂದ 11,000 ಟನ್‌ಗಳು ಸೇರಿದಂತೆ ಹೆಚ್ಚುವರಿ 17,090 ಟನ್ ಈರುಳ್ಳಿ ಆಮದಿಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News