ಸಿರಿಲ್ ವರ್ಮಾ, ಅಶ್ಮಿತಾಗೆ ಸಿಂಗಲ್ಸ್ ಕಿರೀಟ

Update: 2019-12-06 17:58 GMT

ಪೊಖಾರ, ಡಿ.6: ಅಶ್ಮಿತಾ ಚಾಲಿಹ ಹಾಗೂ ಸಿರಿಲ್ ವರ್ಮಾ ಇಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದ್ದಾರೆ. ಭಾರತ ಬ್ಯಾಡ್ಮಿಂಟನ್‌ನ ವೈಯಕ್ತಿಕ ವಿಭಾಗದಲ್ಲಿ ಒಟ್ಟು 8 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಅಶ್ಮಿತಾ ಹಾಗೂ ಸಿರಿಲ್ ತಲಾ ಒಂದು ಚಿನ್ನದ ಪದಕಗಳನ್ನು ಜಯಿಸಿದರೆ, ಧುೃವ ಕಪಿಲ ಎರಡು ಚಿನ್ನ ಜಯಿಸಿದ್ದಾರೆ. ಕಪಿಲ ಪುರುಷರ ಹಾಗೂ ಮಿಕ್ಸಡ್ ಡಬಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.

ಒಟ್ಟಾರೆ ಭಾರತ 4 ಚಿನ್ನ, 2 ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಜಯಿಸಿದೆ. ಪುರುಷರ ಹಾಗೂ ಮಹಿಳಾ ಟೀಮ್ ಸ್ಪರ್ಧೆಗಳಲ್ಲಿ ತಲಾ ಒಂದು ಚಿನ್ನ ಗೆದ್ದುಕೊಂಡಿದೆ. ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಈ ಹಿಂದೆ ಬೆಳ್ಳಿ ಜಯಿಸಿದ್ದ ಸಿರಿಲ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಇನ್ನೋರ್ವ ಎದುರಾಳಿ ಆರ್ಯಮಾನ್ ಟಂಡನ್‌ರನ್ನು 17-21, 23-21, 21-13 ಗೇಮ್‌ಗಳ ಅಂತರದಿಂದ ಮಣಿಸಿದರು.

ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಅಶ್ಮಿತಾ ಕೊನೆಯ ಕ್ಷಣದಲ್ಲಿ ಸಹ ಆಟಗಾರ್ತಿ ಗಾಯತ್ರಿ ಗೋಪಿಚಂದ್‌ಗೆ ತಿರುಗೇಟು ನೀಡಿ 21-18, 25-23 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಡಬಲ್ಸ್‌ನಲ್ಲಿ ಧುೃವ ಪುರುಷರ ಹಾಗೂ ಮಿಕ್ಸೆಡ್ ಡಬಲ್ಸ್‌ನಲ್ಲಿ ಚಿನ್ನ ಜಯಿಸಿ ಮಿಂಚಿದರು.

 ಪುರುಷರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್ ಜೊತೆ ಆಡಿದ ಧುೃವ ಶ್ರೀಲಂಕಾದ ಸಚಿನ್ ಹಾಗೂ ಬುವನೆಕ ಗುಣತಿಲಕರನ್ನು 21-19, 19-21, 21-18 ಅಂತರದಿಂದ ಮಣಿಸಿ ಚಿನ್ನ ಜಯಿಸಿದ್ದಾರೆ.

ಮಿಕ್ಸೆಡ್ ಡಬಲ್ಸ್‌ನಲ್ಲಿ ಮೇಘನಾ ಜಕ್ಕಂಪುಡಿ ಜೊತೆ ಕಣಕ್ಕಿಳಿದ ಧುೃವ ಶ್ರೀಲಂಕಾದ ಸಚಿನ್ ಹಾಗೂ ಪ್ರಮೋದಿಕಾರನ್ನು 21-16, 21-14 ಗೇಮ್‌ಗಳ ಅಂತರದಿಂದ ಸೋಲಿಸಿದರು.

ಗುರುವಾರ ಭಾರತದ ಮಹಿಳಾ ಡಬಲ್ಸ್ ಜೋಡಿ ಸಿಕ್ಕಿ ರೆಡ್ಡಿ-ಮೇಘನಾ ಹಾಗೂ ಕುಹೂ ಗರ್ಗ್-ಅನುಷ್ಕಾ ಪಾರಿಖ್ ಸೆಮಿ ಫೈನಲ್‌ನಲ್ಲಿ ಸೋಲನುಭವಿಸಿ ಕಂಚಿಗೆ ತೃಪ್ತಿಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News