ಲಂಕಾ ವಿರುದ್ಧ ಸರಣಿಗೆ ಪಾಕ್ ತಂಡದಲ್ಲಿ ಫವಾದ್‌ಗೆ ಸ್ಥಾನ

Update: 2019-12-07 18:03 GMT

ಲಾಹೋರ್, ಡಿ.7: ಹತ್ತು ವರ್ಷಗಳ ಹಿಂದೆ ಕೊನೆಯ ಬಾರಿ ಪಾಕ್ ತಂಡದಲ್ಲಿ ಆಡಿದ್ದ ಎಡಗೈ ಬ್ಯಾಟ್ಸ್‌ಮನ್ ಫವಾದ್ ಆಲಂ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಗಳ ಐತಿಹಾಸಿಕ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಫವಾದ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇದೀಗ ನಡೆಯುತ್ತಿರುವ  ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ ಕ್ವಾಯ್ಡಾ-ಎ-ಅಜಮ್ ಟ್ರೋಫಿಯಲ್ಲಿ ಅವರು ಈವರೆಗೆ ಸಿಂಧ್ ಪರ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.

34 ವರ್ಷದ ಫವಾದ್ ಈವರೆಗೆ ಪಾಕಿಸ್ತಾನ ಪರ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಒಂದು ಶತಕ ಸೇರಿದಂತೆ 250 ರನ್ ಗಳಿಸಿದ್ದಾರೆ. 2009ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. ಅವರು 38 ಏಕದಿನ ಮತ್ತು 24 ಟ್ವೆಂಟಿ -20 ಪಂದ್ಯಗಳಲ್ಲಿ ಪಾಕ್ ತಂಡದ ಪರ ಆಡಿದ್ದಾರೆ.

ಪಾಕಿಸ್ತಾನದಲ್ಲಿ 10 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಸರಣಿ ನಡೆಯಲಿದೆ. 2009ರಲ್ಲಿ ಶ್ರೀಲಂಕಾದ ತಂಡದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಕಾರಣದಿಂದಾಗಿ ಶ್ರೀಲಂಕಾ ತಂಡ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ವಾಪಸಾಗಿತ್ತು. ಬಳಿಕ ಇಲ್ಲಿ ಯಾವುದೇ ತಂಡ ಟೆಸ್ಟ್ ಆಡಲಿಲ್ಲ. ಶ್ರೀಲಂಕಾ ಕೊನೆಯ ಬಾರಿ ಪ್ರವಾಸ ಕೈಗೊಂಡ ತಂಡವಾಗಿದೆ.

10 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್ ನಡೆಯಲಿದೆ. ಪಾಕಿಸ್ತಾನ ಇತ್ತೀಚೆಗೆ ಆಸ್ಟ್ರೇಲಿಯ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಪಾಕ್ ಮೂರು ಟ್ವೆಂಟಿ-20 ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಒಂದೇ ಒಂದು ಗೆಲುವು ದಾಖಲಿಸುವಲ್ಲಿ ವಿಫಲವಾಗಿದೆ. ಲಂಕಾ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಡಿಸೆಂಬರ್ 11 ರಿಂದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಡಿಸೆಂಬರ್ 19ರಿಂದ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

 ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಉಭಯ ತಂಡಗಳು ಮೂರು ಏಕದಿನ ಮತ್ತು ಟ್ವೆಂಟಿ -20 ಪಂದ್ಯಗಳನ್ನು ಆಡಿವೆ. ಕಳೆದ ತಿಂಗಳು ಟೆಸ್ಟ್ ಸರಣಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಿತ್ತು. ಪಾಕ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಂದ್ಯಗಳನ್ನು ಆಡಲು ದಿಮುತ್ ಕರುಣರತ್ನೆ ನೇತೃತ್ವದ ಶ್ರೀಲಂಕಾ ತಂಡವು ರವಿವಾರ ಪಾಕಿಸ್ತಾನಕ್ಕೆ ತೆರಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News