ಮಹಿಳೆಯರ ವಿರುದ್ಧದ ಅಪರಾಧ ಹೆಚ್ಚುತ್ತಿರುವ ಹಿನ್ನೆಲೆ: ಹುಟ್ಟುಹಬ್ಬ ಆಚರಿಸದಿರಲು ಸೋನಿಯಾ ನಿರ್ಧಾರ

Update: 2019-12-08 15:33 GMT
Photo: PTI

ಹೊಸದಿಲ್ಲಿ, ಡಿ.8: ದೇಶದೆಲ್ಲೆಡೆ ಮಹಿಳೆಯರ ವಿರುದ್ಧದ ಅತ್ಯಾಚಾರ ಪ್ರಕರಣ ಮತ್ತು ಮಹಿಳೆಯರ ಭದ್ರತೆಯ ಕುರಿತ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟು ಹಬ್ಬ ಆಚರಿಸದಿರಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಡಿ.9ರಂದು ಸೋನಿಯಾ ಗಾಂಧಿ 73ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ಈ ವರ್ಷ ಯಾವುದೇ ಸಂಭ್ರಮಾಚರಣೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಸುಟ್ಟು ಹಾಕಿರುವ ಘಟನೆ, ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮೇಲೆ ಅತ್ಯಾಚಾರ ಆರೋಪಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ಸಹಿತ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ ಹೆಚ್ಚುತ್ತಿದೆ. ಇಂತಹ ದುಃಖದ ಸಮಯದಲ್ಲಿ ಜನ್ಮದಿನದ ಸಂಭ್ರಮಾಚರಣೆ ನಡೆಸದಿರಲು ಸೋನಿಯಾ ನಿರ್ಧರಿಸಿದ್ದಾರೆ ಎಂದು ತಿಳಿಸಲಾಗಿದೆ.

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ ಹೆಚ್ಚುತ್ತಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷ , ಮಹಿಳೆಯರಿಗೆ ಭದ್ರತೆ ಒದಗಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಟೀಕಾಪ್ರಹಾರ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News