ಸಂವಿಧಾನ ಕುರಿತು ಗುಜರಾತ್ ಸಿಎಂ ನಿರ್ಣಯಕ್ಕೆ ವಿರೋಧ: ಶಾಸಕ ಜಿಗ್ನೇಶ್ ಮೇವಾನಿ ಅಮಾನತು

Update: 2019-12-10 14:11 GMT

ಗಾಂಧಿನಗರ: ವಡ್ಗಮ್ ಕ್ಷೇತ್ರದ ಪಕ್ಷೇತರ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರನ್ನು ವಿಧಾನಸಭೆಯ ಮೂರು ದಿನಗಳ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ. ಮುಖ್ಯಮಂತ್ರಿ ವಿಜಯ್ ರುಪಾನಿ ಅವರು ನವೆಂಬರ್ 26ರಂದು ಸಂವಿಧಾನ ದಿನ ಆಚರಿಸುವ ಕುರಿತಾದ ನಿಲುವಳಿ ಮಂಡಿಸಿದ್ದನ್ನು ವಿರೋಧಿಸಿದ್ದಕ್ಕೆ ಅವರನ್ನು ಸೋಮವಾರ ಅಮಾನತು ಮಾಡಲಾಗಿದೆ.

ಸಂವಿಧಾನ ದಿನಾಚರಣೆ ಕುರಿತಂತೆ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮಾತನಾಡುತ್ತಾ "ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದ ವೇಳೆ ಆಚರಣೆ ನಡೆದಿತ್ತು ಹಾಗೂ ಸಿಂಗರಿಸಿದ ಆನೆಯ ಮೇಲೆ ಸಂವಿಧಾನದ ಪ್ರತಿಯನ್ನು ಹೊತ್ತು ಸುರೇಂದ್ರನಗರ ಜಿಲ್ಲೆಯಲ್ಲಿ ಮೆರವಣಿಗೆ ಮಾಡಲಾಗಿತ್ತು'' ಎಂದು ಹೇಳಿದಾಗ ನಡುವೆ ಮಾತನಾಡಿ ಮೇವಾನಿ ಅವರು ಭಾಷಣಕ್ಕೆ ಅಡ್ಡಿ ಮಾಡಿದ್ದರು. ಸ್ಪೀಕರ್ ಅವರ ಸತತ ಎಚ್ಚರಿಕೆಯ ನಡುವೆಯೂ ಮೇವಾನಿ ತಮ್ಮ ಮಾತನ್ನು ಮುಂದುವರಿಸಿದ್ದರು. ನಂತರ 'ನೀವು ಸುರೇಂದ್ರನಗರ್ ಜಿಲ್ಲೆಯ ತಂಗಧ್‍ನಲ್ಲಿ ದಲಿತರತ್ತ ಗುಂಡು ಹಾರಿಸಿದ್ದಿರಿ' ಎಂದು ಮೂವರು ದಲಿತ ಯುವಕರ ಬಲಿ ಪಡೆದ ಸೆಪ್ಟೆಂಬರ್ 2012ರ ಪೊಲೀಸ್ ಗೋಲಿಬಾರ್ ಘಟನೆಯನ್ನು ಅವರು ಉಲ್ಲೇಖಿಸಿದ್ದರು.

"ತಂಗಧ್ ಮತ್ತಿತರ ಸಂತ್ರಸ್ತರಿಗೆ ನ್ಯಾಯವೊದಗಿಸದೇ ಇರುವವರು ಹಾಗೂ ಈ ಹಿಂದೆ ಅಂಬೇಡ್ಕರ್ ಅವರ ಸಂವಿಧಾನವನ್ನು ಸಮುದ್ರಕ್ಕೆಸೆಯುವ ಬಗ್ಗೆ ಮಾತನಾಡಿದವರು ಕೇವಲ ಹೆಸರಿಗೆ ಮಾತ್ರ ಸಂವಿಧಾನ ದಿನವನ್ನು ಈಗ ಆಚರಿಸುತ್ತಿದ್ದಾರೆ'' ಎಂದು ಮೇವಾನಿ ಕಿಡಿ ಕಾರಿದ್ದರು. ನಂತರ ಅವರನ್ನು  ಬಲವಂತದಿಂದ ಸದನದಿಂದ ಹೊರಕ್ಕೆ ಕೊಂಡು ಹೋಗಲಾಯಿತು.

ಮೇವಾನಿ ಕ್ಷಮೆ ಯಾಚಿಸಿದರೆ ಅವರ ಅಮಾನತು ಆದೇಶವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ. ಆದರೆ ಮೇವಾನಿ ಕ್ಷಮೆಯಾಚಿಸುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಅನುಸರಿಸುವವರು ಮಾತ್ರ ಸಂವಿಧಾನದ ಬಗ್ಗೆ ಮಾತನಾಡಲು ಅರ್ಹರು ಎಂದು ಫೇಸ್ ಬುಕ್ ವೀಡಿಯೋದಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News