ಹೋರಾಟಗಾರ್ತಿ ಮೇಧಾ ಪಾಟ್ಕರ್ ಪಾಸ್‌ಪೋರ್ಟ್ ಮುಟ್ಟುಗೋಲು

Update: 2019-12-11 12:31 GMT

ಮುಂಬೈ, ಡಿ.11: ‘ನರ್ಮದಾ ಬಚಾವೊ’ ಆಂದೋಲನದ ಕಾರ್ಯಕರ್ತೆ ಮೇಧಾ ಪಾಟ್ಕರ್‌ರ ಪಾಸ್‌ಪೋರ್ಟ್ ಅನ್ನು ಮುಂಬೈಯ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಡಿಸೆಂಬರ್ 9ರಂದು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ವರದಿಯಾಗಿದೆ.

 ಪಾಸ್‌ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸುವಾಗ ತನ್ನ ವಿರುದ್ಧ ಮಧ್ಯಪ್ರದೇಶದಲ್ಲಿ 9 ಪ್ರಕರಣ ವಿಚಾರಣೆಗೆ ಬಾಕಿಯಿದೆ ಎಂಬ ವಿವರವನ್ನು ಯಾಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅಕ್ಟೋಬರ್ 18ರಂದು ಪಾಟ್ಕರ್‌ಗೆ ಶೋಕಾಸ್ ನೋಟಿಸ್ ನೀಡಿತ್ತು. ಪಾಟ್ಕರ್‌ಗೆ 2017ರ ಮಾರ್ಚ್‌ನಲ್ಲಿ ಪಾಸ್‌ಪೋರ್ಟ್ ನೀಡಿದ್ದು ಇದು 10 ವರ್ಷದ ಮಾನ್ಯತೆ ಹೊಂದಿದೆ. ಶೋಕಾಸ್ ನೋಟಿಸ್‌ಗೆ ನವೆಂಬರ್‌ನಲ್ಲಿ ಉತ್ತರಿಸಿದ್ದ ಪಾಟ್ಕರ್, ಪೊಲೀಸರು ಮತ್ತು ನ್ಯಾಯಾಲಯದಿಂದ ದಾಖಲೆ ಪತ್ರ ಸಂಗ್ರಹಿಸಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಸಲ್ಲಿಸಲು ಕಾಲಾವಕಾಶ ಕೋರಿದ್ದರು.

ಈ ಕೋರಿಕೆ ನಿರಾಕರಿಸಿದ್ದ ಅಧಿಕಾರಿಗಳು, ಒಂದು ವಾರದ ಅವಕಾಶ ನೀಡಿದ್ದರು. ತನ್ನ ವಿರುದ್ಧ ದಾಖಲಾಗಿರುವ ಕೆಲವು ಪ್ರಕರಣಗಳು ನ್ಯಾಯಕ್ಕೆ ಆಗ್ರಹಿಸಿ ನಡೆಸಿದ್ದ ಅಹಿಂಸಾತ್ಮಕ, ಶಾಂತಿಯುತ ಪ್ರತಿಭಟನೆಗೆ ಸಂಬಂಧಿಸಿದ್ದು. ಈ ಕುರಿತ ದಾಖಲೆಗಳನ್ನು ಸಂಗ್ರಹಿಸಲು ಸಮಯಾವಕಾಶ ನೀಡಲು ಅಧಿಕಾರಿಗಳು ನಿರಾಕರಿಸಿದ್ದರಿಂದ ಪಾಸ್‌ಪೋರ್ಟನ್ನು ಅವರಿಗೆ ರವಾನಿಸಿದ್ದೇನೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಾಟ್ಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News