ಹೈದರಾಬಾದ್: ಅತ್ಯಾಚಾರ, ಹತ್ಯೆ ಆರೋಪಿಗಳು ಅಪ್ರಾಪ್ತರು ಎಂಬ ವರದಿ ನಿರಾಕರಿಸಿದ ಪೊಲೀಸರು

Update: 2019-12-11 12:53 GMT

ಹೈದರಾಬಾದ್, ಡಿ.11: ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಘಟನೆಯ ನಾಲ್ವರು ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಎಂಬ ಹೇಳಿಕೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಈ ನಾಲ್ವರು ಆರೋಪಿಗಳೂ ಬಳಿಕ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತರಾಗಿದ್ದರು. ನಾಲ್ವರೂ ಆರೋಪಿಗಳು 20 ಮತ್ತು ಹೆಚ್ಚಿನ ವಯಸ್ಸಿನವರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸೈಬರಾಬಾದ್ ಪೊಲೀಸರು ಹೇಳಿದ್ದರು. ಆದರೆ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ ಇಬ್ಬರು ಆರೋಪಿಗಳ ಹೆತ್ತವರು, ತಮ್ಮ ಮಕ್ಕಳು ಅಪ್ರಾಪ್ತ ವಯಸ್ಸಿನವರು ಎಂದು ಹೇಳಿದ್ದು ಇದಕ್ಕೆ ಸಂಬಂಧಿಸಿದ ಕೆಲವು ದಾಖಲೆಪತ್ರಗಳನ್ನು ಪ್ರದರ್ಶಿಸಿದ್ದರು.

 ಆಧಾರ್ ಕಾರ್ಡ್‌ನ ದಾಖಲೆಯಲ್ಲೂ ನಾಲ್ವರು ಆರೋಪಿಗಳು ಪ್ರಾಪ್ತ ವಯಸ್ಕರು ಎಂದು ಸ್ಪಷ್ಟವಾಗಿದೆ. ಆದ್ದರಿಂದ ಆರೋಪಿಗಳ ಹೆತ್ತವರ ಹೇಳಿಕೆ ಸತ್ಯವಲ್ಲ. ಓರ್ವ ಆರೋಪಿಯ ಹೆತ್ತವರು ತೋರಿಸಿದ ಶಾಲಾ ಪ್ರಮಾಣಪತ್ರ ಅಸಲಿಯಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಆರೋಪಿ 10ನೇ ತರಗತಿ ಇರುವಾಗಲೇ ಶಾಲೆ ಬಿಟ್ಟಿದ್ದ ಎಂದು ಅಧಿಕಾರಿ ಹೇಳಿದ್ದಾರೆ. ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾನವಹಕ್ಕು ಆಯೋಗದ ಎದುರು ಹೇಳಿಕೆ ನೀಡಿದ್ದ ಓರ್ವ ಆರೋಪಿಯ ತಾಯಿ, ನಕಲಿ ಎನ್‌ಕೌಂಟರ್ ಮೂಲಕ ತನ್ನ ಮಗನನ್ನು ಹತ್ಯೆ ಮಾಡಲಾಗಿದೆ. ಆತ ಅಪ್ರಾಪ್ತ ವಯಸ್ಸಿನವ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News