ಪಟೇಲ್ ಪುನರ್ಜನ್ಮವೆತ್ತಿ ಮೋದಿಯನ್ನು ಭೇಟಿಯಾದರೆ ಸಿಟ್ಟಿಗೇಳುವುದು ಗ್ಯಾರಂಟಿ: ಕಾಂಗ್ರೆಸ್

Update: 2019-12-19 05:04 GMT

ಹೊಸದಿಲ್ಲಿ,ಡಿ.11: ಬುಧವಾರ ರಾಜ್ಯಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಕುರಿತು ಆಡಳಿತ ಬಿಜೆಪಿ ವಿರುದ್ಧ ತೀವ್ರ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಲು ಪುನರ್ಜನ್ಮದಲ್ಲಿ ಹಿಂದುಗಳ ನಂಬಿಕೆಯನ್ನು ಪ್ರಸ್ತಾಪಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲರೇನಾದರೂ ಮೋದಿಯವರನ್ನು ಭೇಟಿಯಾದರೆ ಪೌರತ್ವ ಮಸೂದೆ ಕುರಿತಂತೆ ಕೆಂಡಾಮಂಡಲರಾಗುವುದು ಗ್ಯಾರಂಟಿ ಎಂದು ಹೇಳುವ ಮೂಲಕ ಸದನದಲ್ಲಿ ನಗೆಯ ಅಲೆಗಳನ್ನು ಎಬ್ಬಿಸಿದರು.

ನಮ್ಮ ಧರ್ಮದಲ್ಲಿ ಪುನರ್ಜನ್ಮವನ್ನು ಮತ್ತು ನಾವು ನಮ್ಮ ಹಿರಿಯರನ್ನು ಭೇಟಿಯಾಗುತ್ತೇವೆ ಎನ್ನುವುದನ್ನು ನಂಬುತ್ತೇವೆ. ಹೀಗಾಗಿ ಸರ್ದಾರ್ ಪಟೇಲ್ ಅವರು ಮೋದಿಯವರನ್ನು ಭೇಟಿಯಾದರೆ ಸಿಟ್ಟಿಗೇಳಲಿದ್ದಾರೆ. ಗಾಂಧೀಜಿಯವರು ದುಃಖಿತರಾಗಬಹುದು,ಆದರೆ ಪಟೇಲ್ ಕೆಂಡಾಮಂಡಲರಾಗುವುದು ಗ್ಯಾರಂಟಿ ಎಂದು ಶರ್ಮಾ ಹೇಳಿದರು.

ನೀವು ತಂದಿರುವ ಈ ಮಸೂದೆ ಭಾರತೀಯ ಸಂವಿಧಾನದ ಬುನಾದಿಯ ಮೇಲಿನ ದಾಳಿಯಾಗಿದೆ. ಅದು ಭಾರತ ಗಣತಂತ್ರದ ಮೇಲಿನ ದಾಳಿಯೂ ಆಗಿದೆ. ಅದು ಭಾರತದ ಆತ್ಮಕ್ಕೆ ನೋವನ್ನುಂಟು ಮಾಡುತ್ತದೆ. ಅದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ನೈತಿಕತೆ ಪರೀಕ್ಷೆಯಲ್ಲಿ ವಿಫಲಗೊಂಡಿರುವ ಅದು ವಿಭಜನಕಾರಿಯಾಗಿದೆ ಮತ್ತು ತಾರತಮ್ಯದ್ದಾಗಿದೆ ಎಂದ ಅವರು,ವಿಭಜನೆಯ ಬಳಿಕ ಹಲವಾರು ಜನರು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಿಂದ ಭಾರತಕ್ಕೆ ಬಂದಿದ್ದು,ಪೌರತ್ವವನ್ನು ಪಡೆದುಕೊಂಡು ಗೌರವದಿಂದ ಬದುಕಿದ್ದಾರೆ. ನಮ್ಮ ಇಬ್ಬರು ಮಾಜಿ ಪ್ರಧಾನಿಗಳಾದ ಐ.ಕೆ.ಗುಜ್ರಾಲ್ ಮತ್ತು ಮನಮೋಹನ್ ಸಿಂಗ್ ಅವರೂ ವಿಭಜನೆಯ ನಂತರ ಭಾರತಕ್ಕೆ ಬಂದಿದ್ದರು ಎಂದರು.

ವಿಭಜನೆಗಾಗಿ ಕಾಂಗ್ರೆಸ್ ಪಕ್ಷವನ್ನು ದೂರುವುದು ಸರಿಯಲ್ಲ ಎಂದ ಅವರು,ಬಿಜೆಪಿಯ ಆದರ್ಶ ವ್ಯಕ್ತಿಗಳಲ್ಲಿ ಒಬ್ಬರಾದ ಸಾವರ್ಕರ್ ಹಿಂದು ಮಹಾಸಭಾದ ಮತ್ತು ಮುಹಮ್ಮದ್ ಅಲಿ ಜಿನ್ನಾ ಅವರು ಮುಸ್ಲಿಮ್‌ಲೀಗ್‌ನ ನಾಯಕರಾಗಿದ್ದರು. ಸಾವರ್ಕರ್ ಅವರೇ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಮುಸ್ಲಿಮ್ ಲೀಗ್ ಭಾರತದ ವಿಭಜನೆಯ ನಿರ್ಣಯವನ್ನು ಅಂಗೀಕರಿಸಿತ್ತು ಎಂದರು.

‘ ಮಹಾತ್ಮಾ ಗಾಂಧಿಯವರ ಕನ್ನಡಕದ ಮೂಲಕ ಭಾರತವನ್ನು,ಅದರ ಸಮಾಜವನ್ನು ಮತ್ತು ಅದರ ಮಾನವೀಯತೆಯನ್ನು ನೋಡಿ ಎಂದು ನಾನು ನಿಮ್ಮನ್ನು (ಸರಕಾರ) ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಪೌರತ್ವ ತಿದ್ದುಪಡಿ ಮಸೂದೆ ಅದಕ್ಕೆ ವಿರುದ್ಧವಾಗಿದೆ ’ಎಂದು ಶರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News