ಪೌರತ್ವ ಮಸೂದೆ: ಈಶಾನ್ಯ ರಾಜ್ಯಗಳಿಗೆ ವಿನಾಯಿತಿಗೆ ಆಗ್ರಹ

Update: 2019-12-19 06:08 GMT

ಶಿಲಾಂಗ್, ಡಿ.13: ಈಶಾನ್ಯ ರಾಜ್ಯಗಳಿಗೆ ಪೌರತ್ವ ಮಸೂದೆಯಿಂದ ವಿನಾಯಿತಿ ನೀಡುವ ಮೂಲಕ ಈ ರಾಜ್ಯಗಳಲ್ಲಿ ಶಾಂತಿ ನೆಲೆಸುವುದನ್ನು ಖಾತರಿಗೊಳಿಸಬೇಕು ಎಂದು ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ)ಯ ಮುಖಂಡೆ, ಸಂಸದೆ ಅಗಥಾ ಸಂಗ್ಮ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ್ದಾರೆ.

ಈಶಾನ್ಯ ರಾಜ್ಯಗಳು ಸಂಕೀರ್ಣ ಪ್ರದೇಶದಲ್ಲಿದ್ದು ಇವುಗಳ ಸಮಗ್ರ ರಕ್ಷಣೆಯ ಅಗತ್ಯವಿದೆ. ಆದ್ದರಿಂದ ಸರಕಾರ ಪೌರತ್ವ ಮಸೂದೆಯ ಬಗ್ಗೆ ಮರುಪರಿಶೀಲನೆ ನಡೆಸಿ ಇಡೀ ವಲಯವನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿಡಬೇಕು. ಜನತೆಯಲ್ಲಿ ಶಾಂತಿ ಮತ್ತು ವಿಶ್ವಾಸ ಮೂಡಿಸಲು ಇರುವ ಏಕೈಕ ಮಾರ್ಗವಿದಾಗಿದೆ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಸಂಗ್ಮ ಹೇಳಿದ್ದಾರೆ.

ಜನಸಂಖ್ಯೆಯಲ್ಲಿ ಆಗುವ ಬದಲಾವಣೆ ಈ ಪ್ರದೇಶದ ಆದಿವಾಸಿ ಜನರ ಅಸ್ಮಿತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿ ಈಶಾನ್ಯ ರಾಜ್ಯಗಳ ಜನತೆಯ ಮನದಲ್ಲಿದೆ. ಮಸೂದೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಎಲ್ಲಾ ಪ್ರಯತ್ನ ವಿಫಲವಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈಶಾನ್ಯ ರಾಜ್ಯಗಳ ವಿರೋಧಿಯಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಆದ್ದರಿಂದ ಕೇಂದ್ರ ಸರಕಾರ ಈಗ ತಕ್ಷಣ ಕ್ರಮ ಕೈಗೊಂಡು ಈ ಮಸೂದೆಯ ವ್ಯಾಪ್ತಿಯಿಂದ ಈಶಾನ್ಯ ರಾಜ್ಯಗಳನ್ನು ಹೊರಗಿಡಬೇಕು ಎಂದು ಸಂಗ್ಮ ಒತ್ತಾಯಿಸಿದ್ದಾರೆ.

ಮೇಘಾಲಯದಲ್ಲಿ ಎನ್‌ಪಿಪಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಬಿಜೆಪಿ ಸಹಪಕ್ಷವಾಗಿದ್ದು ಅಗಥಾ ಸಂಗ್ಮರ ಸಹೋದರ ಕೋನ್ರಾಡ್ ಸಂಗ್ಮ ಮೇಘಾಲಯದ ಮುಖ್ಯಮಂತ್ರಿಯಾಗಿದ್ದಾರೆ. ಈ ಮಧ್ಯೆ, ಗುರುವಾರ ರಾತ್ರಿಯಿಂದ ಮೇಘಾಲದ ರಾಜಧಾನಿ ಶಿಲಾಂಗ್‌ನ ಕೆಲ ಭಾಗಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಡಿಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News