ಡಿ.14ರಂದು ಕಾಂಗ್ರೆಸ್‌ನಿಂದ ‘ಭಾರತ್ ಬಚಾವೊ’ ರ‍್ಯಾಲಿ

Update: 2019-12-19 06:09 GMT

ಹೊಸದಿಲ್ಲಿ,ಡಿ.13: ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ನರೇಂದ್ರ ಮೋದಿ ಸರಕಾರದ ನೀತಿಗಳನ್ನು ವಿರೋಧಿಸಿ ಡಿ.14ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ‘ಭಾರತ ಬಚಾವೊ’ ರ‍್ಯಾಲಿಯನ್ನು ಹಮ್ಮಿಕೊಂಡಿದೆ. ಪೌರತ್ವ (ತಿದ್ದುಪಡಿ) ಮಸೂದೆ,ಮಹಿಳೆಯರ ವಿರುದ್ಧ ದೌರ್ಜನ್ಯಗಳು,ಸರಕಾರದ ವಿಭಜನಕಾರಿ ನೀತಿಗಳು ಸೇರಿದಂತೆ ಹಲವಾರು ವಿಷಯಗಳು ರ್ಯಾಲಿಯಲ್ಲಿ ಪ್ರಸ್ತಾವಗೊಳ್ಳಲಿವೆ.

ನಿರುದ್ಯೋಗ, ಬೆಲೆಏರಿಕೆ ಮತ್ತು ರೈತರ ಸಮಸ್ಯೆಗಳನ್ನು ಪ್ರಧಾನವಾಗಿಟ್ಟುಕೊಂಡು ಕಾಂಗ್ರೆಸ್ ದೇಶಾದ್ಯಂತ ನಡೆಸಿದ ಪ್ರತಿಭಟನೆಗಳಿಗೆ ಈ ರ‍್ಯಾಲಿಯೊಂದಿಗೆ ತೆರೆ ಬೀಳಲಿದೆ. ರಾಷ್ಟ್ರಾದ್ಯಂತ ಆಕ್ರೋಶವನ್ನು ಸೃಷ್ಟಿಸಿದ ಇತ್ತೀಚಿನ ಹೈದರಾಬಾದಿನಲ್ಲಿ ಪಶುವೈದ್ಯೆಯ ಅತ್ಯಾಚಾರ-ಹತ್ಯೆ ಮತ್ತು ಉನ್ನಾವೊ ಘಟನೆಗಳು ಹಾಗೂ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಸತ್ತಿನ ಅಂಗೀಕಾರದಂತಹ ವಿಷಯಗಳೂ ರ‍್ಯಾಲಿಯಲ್ಲಿ ಪ್ರಮುಖವಾಗಿ ಪ್ರಸ್ತಾವಗೊಳ್ಳುವ ನಿರೀಕ್ಷೆಯಿದೆ.

ಇದು ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಐತಿಹಾಸಿಕ ರ್ಯಾಲಿಯಾಗಲಿದ್ದು,ಕನ್ಯಾಕುಮಾರಿಯಿಂದ ಕಾಶ್ಮೀರವರೆಗಿನ ನಾಯಕರು ಮತ್ತು ಕಾರ್ಯಕರ್ತರು ಈ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News