ಕಳೆದ ವರ್ಷ ಪಿಎಚ್‌ಡಿಗೆ 1.7 ಲಕ್ಷ ಅಭ್ಯರ್ಥಿಗಳ ನೋಂದಣಿ

Update: 2019-12-13 14:04 GMT

ಹೊಸದಿಲ್ಲಿ, ಡಿ.13: ಕಳೆದ ವರ್ಷ(2018-19ರಲ್ಲಿ) ಸುಮಾರು 1.7 ಲಕ್ಷ ಅಭ್ಯರ್ಥಿಗಳು ಪಿಎಚ್‌ಡಿ ಅಧ್ಯಯನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಉನ್ನತ ಅಧ್ಯಯನದ ಅಖಿಲ ಭಾರತ ಸರ್ವೇಕ್ಷಣೆ (ಎಐಎಸ್‌ಎಚ್‌ಇ) ಯ ವರದಿ ತಿಳಿಸಿದೆ.

ದೇಶದ ಕಾಲೇಜು ಮತ್ತು ವಿವಿಗಳಲ್ಲಿ ಪಿಎಚ್‌ಡಿ, ಎಂಫಿಲ್, ಸ್ನಾತಕೋತ್ತರ ಪದವಿ, ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್, ಇಂಟಿಗ್ರೇಟೆಡ್ ಕೋರ್ಸ್‌ಗಳಿಗೆ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳ ನಿಖರ ಮಾಹಿತಿಯನ್ನು ಎಐಎಸ್‌ಎಚ್‌ಇ ನೀಡುತ್ತದೆ.

ರಾಜ್ಯಸಭೆಯಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವ ರಮೇಶ್ ಪೋಖ್ರಿಯಾಲ್ ಈ ಮಾಹಿತಿ ನೀಡಿದರು. ಇವರಲ್ಲಿ 15,941 ವಿದ್ಯಾರ್ಥಿಗಳು ಕೇಂದ್ರ ವಿವಿಗಳಲ್ಲಿ ನೋಂದಣಿ ಮಾಡಿಕೊಂಡಿದ್ಧಾರೆ ಎಂದು ಸಚಿವರು ತಿಳಿಸಿದ್ದಾರೆ. ಉನ್ನತ ಅಧ್ಯಯನಕ್ಕೆ ವಿದೇಶಕ್ಕೆ ತೆರಳಿದ ವಿದ್ಯಾರ್ಥಿಗಳ ಮಾಹಿತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 2018-19ರ ಶೈಕ್ಷಣಿಕ ಅವಧಿಯಲ್ಲಿ 6,20,156 ಅಭ್ಯರ್ಥಿಗಳು ಉನ್ನತ ಅಧ್ಯಯನಕ್ಕೆ ವಿದೇಶಕ್ಕೆ ತೆರಳಿದ್ದಾರೆ. 2016-17ರಲ್ಲಿ ಈ ಸಂಖ್ಯೆ 6,84,823ಕ್ಕೆ ತಲುಪಿತ್ತು ಎಂದರು.

ವಿದೇಶಕ್ಕೆ ಉನ್ನತ ಅಧ್ಯಯನಕ್ಕೆ ತೆರಳಿದ್ದವರಲ್ಲಿ 1,72,600 ವಿದ್ಯಾರ್ಥಿಗಳು ಕೆನಡಾಕ್ಕೆ ತೆರಳಿದ್ದರೆ, ಇಂಗ್ಲೆಂಡಿಗೆ ಹೋದ ವಿದ್ಯಾರ್ಥಿಗಳ ನಿಖರ ಸಂಖ್ಯೆಯ ಮಾಹಿತಿ ಸರಕಾರದ ಬಳಿಯಿಲ್ಲ. 14,000 ವಿದ್ಯಾರ್ಥಿಗಳು ಫಿಪಿಫೈನ್ಸ್ ಹಾಗೂ 15,600 ವಿದ್ಯಾರ್ಥಿಗಳು ರಶ್ಯಾಕ್ಕೆ ತೆರಳಿದ್ದಾರೆ. 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅಮೆರಿಕದಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಆಸಕ್ತಿ ತೋರಿದ್ದಾರೆ. 2016 ಮತ್ತು 2017ರಲ್ಲಿ 4 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಉನ್ನತ ಅಧ್ಯಯನಕ್ಕೆ ಅಮೆರಿಕಕ್ಕೆ ತೆರಳಿದ್ದಾರೆ. ಅಮೆರಿಕದಲ್ಲಿ ಉನ್ನತ ಅಧ್ಯಯನಕ್ಕೆ ನೋಂದಣಿಯಾಗುವ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ರಶ್ಯ, ಅರ್ಮೇನಿಯಾ, ಆಸ್ಟ್ರೇಲಿಯಾ, ಕೆನಡಾ, ಜಾರ್ಜಿಯಾ, ಹಾಂಕಾಂಗ್ ಇತ್ಯಾದಿ ದೇಶಗಳಲ್ಲಿ ನೋಂದಣಿಯಾಗುವ ಪ್ರಮಾಣ ಹೆಚ್ಚಿದೆ ಎಂದು ಸರಕಾರ ಬಿಡುಗಡೆಗೊಳಿಸಿರುವ ಅಂಕಿಅಂಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News