ಸುದ್ದಿವಾಹಿನಿಯ ಕಚೇರಿಗೆ ನುಗ್ಗಿ ಸಿಬ್ಬಂದಿಗೆ ಪೊಲೀಸರಿಂದ ಥಳಿತ: ಆರೋಪ

Update: 2019-12-13 14:45 GMT

ಹೊಸದಿಲ್ಲಿ,ಡಿ.13: ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಗುವಾಹಟಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ಗುರುವಾರ ಖಾಸಗಿ ಸುದ್ದಿವಾಹಿನಿ ಪ್ರಾಗ್ ನ್ಯೂಸ್ ಕಚೇರಿಗೆ ನುಗ್ಗಿದ ಪೊಲೀಸರು ಅದರ ಸಿಬ್ಬಂದಿಗಳನ್ನು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಜೆ ಆರು ಗಂಟೆಯ ಸುಮಾರಿಗೆ ನಗರದ ಉಲುಬಾರಿ ಪ್ರದೇಶದಲ್ಲಿರುವ ಪ್ರಾಗ್ ನ್ಯೂಸ್ ಆವರಣವನ್ನು ಪ್ರವೇಶಿಸಿದ ಪೊಲೀಸರು ಕಟ್ಟಡದ ಹೊರಗೆ ಕುಳಿತಿದ್ದ ಕೆಲವು ಸಿಬ್ಬಂದಿಗಳನ್ನು ಥಳಿಸಿದ ಬಳಿಕ ಕಚೇರಿಗೆ ನುಗ್ಗಿ ರಿಸೆಪ್ಶನ್ ಬಳಿಯಿದ್ದ ಇತರ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದ್ದಾರೆ. ಇದು ಸಂಪೂರ್ಣವಾಗಿ ಅಪ್ರಚೋದಿತವಾಗಿದ್ದು,ಅಸ್ಸಾಂ ಪೊಲೀಸರಿಂದ ಬೇಷರತ್ ಕ್ಷಮೆಯಾಚನೆಗೆ ನಾವು ಆಗ್ರಹಿಸುತ್ತಿದ್ದೇವೆ ಎಂದು ಸುದ್ದಿವಾಹಿನಿಯ ಮ್ಯಾನೇಜಿಂಗ್ ಎಡಿಟರ್ ಪ್ರಣಯ ಬೊರ್ದೊಲಾಯಿ ತಿಳಿಸಿದರು.

ಪೊಲೀಸರು ಕಟ್ಟಡವನ್ನು ಪ್ರವೇಶಿಸುವ ಮುನ್ನ ಆ ಪ್ರದೇಶದಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನು ಚದುರಿಸಿದ್ದರು ಮತ್ತು ಮನೆಗೆ ಹೋಗುವಂತೆ ಸೂಚಿಸಿದ್ದರು. ಆದರೆ ಪೊಲೀಸರು ಮಾಧ್ಯಮ ಕಚೇರಿಯನ್ನು ಪ್ರವೇಶಿಸಲು ಯಾವುದೇ ಕಾರಣವಿರಲಿಲ್ಲ ಎಂದರು.

 ಬುಧವಾರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಎಲ್ಲ ಖಾಸಗಿ ಟಿವಿ ವಾಹಿನಿಗಳಿಗೆ ರವಾನಿಸಿದ್ದ ನೋಟಿಸ್‌ನಲ್ಲಿ ರಾಷ್ಟ್ರ ವಿರೋಧಿ ಧೋರಣೆಗಳನ್ನು ಉತ್ತೇಜಿಸುವ ಅಥವಾ ದೇಶದ ಸಮಗ್ರತೆಗೆ ಧಕ್ಕೆಯನ್ನುಂಟು ಮಾಡುವ ಯಾವುದೇ ವಿಷಯವನ್ನು ಪ್ರಸಾರಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿತ್ತು. ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ವಿರುದ್ಧವಾದ ಯಾವುದೂ ಪ್ರಸಾರವಾಗದಂತೆ ಎಚ್ಚರಿಕೆ ವಹಿಸುವಂತೆಯೂ ಅದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News