ಪೌರತ್ವ ಕಾಯ್ದೆ ಜಾರಿ ತಡೆಯುವ ಅಧಿಕಾರ ರಾಜ್ಯಗಳಿಗಿಲ್ಲ: ಗೃಹ ಇಲಾಖೆಯ ಹೇಳಿಕೆ

Update: 2019-12-19 06:07 GMT

ಹೊಸದಿಲ್ಲಿ, ಡಿ.13: ಕೇಂದ್ರ ಸರಕಾರದ ಅಧಿಕೃತ ಆದೇಶದ ನಂತರ ಜಾರಿಯಾಗಿರುವ ಪೌರತ್ವ ಕಾಯ್ದೆಯನ್ನು ತಡೆಯುವ ಅಧಿಕಾರ ಯಾವುದೇ ರಾಜ್ಯ ಸರಕಾರಗಳಿಗೆ ಇಲ್ಲ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಸಂವಿಧಾನದ 7ನೇ ಅನುಸೂಚಿಯಡಿ ಜಾರಿಯಾಗಿರುವ ಕೇಂದ್ರ ಸರಕಾರದ ಕಾಯ್ದೆಯನ್ನು ತಿರಸ್ಕರಿಸುವ ಅಧಿಕಾರ ರಾಜ್ಯ ಸರಕಾರಗಳಿಗೆ ಇಲ್ಲ. ಯಾವುದೇ ವ್ಯಕ್ತಿಗೆ ಪೌರತ್ವ ನೀಡುವುದು ಕೇಂದ್ರ ಸರಕಾರದ ವಿಶೇಷಾಧಿಕಾರವಾಗಿದೆ ಎಂದು ಗೃಹ ಸಚಿವಾಲಯದ ಉನ್ನತ ಅಧಿಕಾರಿ ಹೇಳಿದ್ದಾರೆ.

ವಿಪಕ್ಷಗಳ ನೇತೃತ್ವದ ಸರಕಾರವಿರುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಪಂಜಾಬ್ ಪೌರತ್ವ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿವೆ. ನೆರೆಯ 3 ರಾಷ್ಟ್ರಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಉದ್ದೇಶದ ಕಾಯ್ದೆ ಅಸಾಂವಿಧಾನಿಕ ಮತ್ತು ತಾರತಮ್ಯದ ಕ್ರಮವಾಗಿದೆ ಎಂದು ವಿಪಕ್ಷಗಳು ಟೀಕಿಸಿವೆ. ಸಂಸತ್ತಿನಲ್ಲಿ ಅಂಗೀಕಾರ ಪಡೆದಿದ್ದರೂ ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳದಲ್ಲಿ ಪೌರತ್ವ ಕಾಯ್ದೆ ಜಾರಿಯಾಗಲು ಬಿಡುವುದಿಲ್ಲ. ಈ ಕಾಯ್ದೆ ಭಾರತವನ್ನು ವಿಭಜಿಸಲಿದೆ. ತಾವು ಅಧಿಕಾರದಲ್ಲಿರುವ ತನಕ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು.

ಧರ್ಮದ ಆಧಾರದಲ್ಲಿ ಪೌರತ್ವ ನಿರ್ಧರಿಸುವ ಈ ಅಸಾಂವಿಧಾನಿಕ ಕಾಯ್ದೆಗೆ ಕೇರಳ ರಾಜ್ಯದಲ್ಲಿ ಜಾಗವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ಈಶಾನ್ಯ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ಮುಂದುವರಿದಿರುವಂತೆಯೇ, ಪೌರತ್ವ ಮಸೂದೆಗೆ ಗುರುವಾರ ತಡರಾತ್ರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದು ಈಗ ಇದು ಕಾಯ್ದೆಯ ರೂಪ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News